ಜಮ್ಮು-ಕಾಶ್ಮೀರ ಜನರಿಗೆ ಎಲ್ಲಾ ರೀತಿಯ ನೈತಿಕ, ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲ ನೀಡುವುದಾಗಿ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಗಿಲಾನಿ ನೇತೃತ್ವದಲ್ಲಿ ನಡೆದ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ ಹಾಗೂ ಹಿರಿಯ ಸಚಿವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ತಿಳಿಸಿದ್ದಾರೆ.
ನಾವು ಎಂದಿನಂತೆ ಕಾಶ್ಮೀರದ ಸಹೋದರ, ಸಹೋದರಿಯರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದ ಗಿಲಾನಿ, ಕಾಶ್ಮೀರ ಜನರ ಹೋರಾಟಕ್ಕೂ ಪಾಕಿಸ್ತಾನ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ, ಪಾಕಿಸ್ತಾನ ಭಾರತಕ್ಕೆ ಸಮಾನ ರೀತಿಯ ಗೌರವ ನೀಡುವುದಾಗಿ ತಿಳಿಸಿದರು. ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ದೇಶದ ಭದ್ರತೆಯ ಪರಿಸ್ಥಿತಿ ತುಂಬಾ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.