ಉತ್ತರ ಬಾಗ್ದಾದ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟದಲ್ಲಿ ಎಂಟು ಮಂದಿ ಇರಾನಿಯನ್ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಕಾಜಿಮಿಯಾ ಚಿನ್ನದ ಗೋಪುರ ಹೊಂದಿರುವ ಮೌಸ್ಸಾ ಅಲ್ ಕಾಧೀಮ್ ಮಸೀದಿ ಸಮೀಪ ಸ್ಫೋಟಿಸಿದ ಬಾಂಬ್ ದಾಳಿಗೆ ಐದು ಯಾತ್ರಾರ್ಥಿಗಳು ಬಲಿಯಾಗಿದ್ದರೆ, ಶಿಯಾಗಳು ಪ್ರಾಬಲ್ಯ ಹೊಂದಿರುವ ಶುಲಾ ಪ್ರದೇಶದಲ್ಲಿ ಕಾರ್ ಬಾಂಬ್‌ವೊಂದು ಬಸ್ ಅನ್ನು ಗುರಿಯಾಗಿರಿಸಿ ಸ್ಫೋಟಿಸಿದ ಪರಿಣಾಮ ಮೂರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಎರಡು ಪ್ರತ್ಯೇಕ ಸ್ಫೋಟದಲ್ಲಿ ಸುಮಾರು 52 ಮಂದಿ ಗಾಯಗೊಂಡಿದ್ದಾರೆ. ಒಟ್ಟು ಎಂಟು ಮಂದಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.
ಸುನ್ನಿ ಬಂಡುಕೋರರು ಇಲ್ಲಿನ ಶಿಯಾ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. ಜಗತ್ತಿನಾದ್ಯಂತದಿಂದ ಸಾವಿರಾರು ಶಿಯಾ ಮುಸ್ಲಿಮರು ಇರಾಕ್ ಮಸೀದಿಗೆ ಆಗಮಿಸುತ್ತಾರೆ. ಆದರೆ ಈ ಸಂದರ್ಭವನ್ನೇ ಗುರಿಯಾಗಿರಿಸಿಕೊಂಡು ಸುನ್ನಿ ಬಂಡುಕೋರರು ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದ್ದಾರೆ.