ಸರಕಾರವನ್ನ ಉರುಳಿಸಲ್ಲ;ನಾವು ಪ್ರಜಾಪ್ರಭುತ್ವ ಪರ-ಪಾಕ್ ಮಿಲಿಟರಿ
ಇಸ್ಲಾಮಾಬಾದ್, ಶನಿವಾರ, 4 ಡಿಸೆಂಬರ್ 2010( 18:45 IST )
ಪಾಕಿಸ್ತಾನದ ಐಎಸ್ಐ ವರಿಷ್ಠ ಅಶ್ಫಾಕ್ ಪರ್ವೆಜ್ ಕಯಾನಿ ಅವರು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರನ್ನು ಗದ್ದುಗೆಯಿಂದ ಕೆಳಗಿಳಿಸಿ ಮಿಲಿಟರಿ ಆಡಳಿತ ಹೇರುವ ಸಂಚು ರೂಪಿಸಿರುವುದಾಗಿ ವಿಕಿಲೀಕ್ಸ್ ದಾಖಲೆ ಬಹಿರಂಗಗೊಳಿಸಿದ ಬೆನ್ನಲ್ಲೇ, ಅದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಆರ್ಮಿ, ತಾವು ಪ್ರಜಾಪ್ರಭುತ್ವದ ಪರವಾಗಿದ್ದು ಯಾವುದೇ ಕಾರಣಕ್ಕೂ ಸರಕಾರ ಉರುಳಿಸುವ ಸಂಚು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಐಎಸ್ಐ ಮತ್ತು ರಾಜಕಾರಣಿಗಳ ನಡುವಿನ ಗಳಸ್ಯ-ಕಂಠಸ್ಯವನ್ನು ವಿಕಿಲೀಕ್ಸ್ ವಿಶ್‌ಸ್ಟೆಲ್ ಬ್ಲೋವೆರ್ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಹೊರಹಾಕಿತ್ತು. ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಐಎಸ್ಐ, ಸಂವಿಧಾನಾತ್ಮಕ ಚೌಕಟ್ಟಿನಲ್ಲಿಯೇ ರಾಜಕೀಯವಾಗಿ ಬೆಂಬಲ ನೀಡುವುದಾಗಿ ತಿಳಿಸಿದೆ.
ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜಕೀಯ ಮುಖಂಡರ ಆಡಳಿತದಲ್ಲಿ ಐಎಸ್ಐ ವರಿಷ್ಠ ಅಶ್ಫಾಕ್ ಪರ್ವೆಜ್ ಕಯಾನಿ ಅವರು ಗೌರವಿಸುವುದಾಗಿ ತಿಳಿಸಿದ್ದಾರೆಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಅತಾರ್ ಅಬ್ಬಾಸ್ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.