ಸರಕಾರಿ ಕಚೇರಿ ಆವರಣದೊಳಗೆ ಇಬ್ಬರು ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯಲ್ಲಿ ಸುಮಾರು 40 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನ ವಾಯುವ್ಯ ಭಾಗದಲ್ಲಿ ಸೋಮವಾರ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊಹ್ಮಂಡ್ ಬುಡಕಟ್ಟು ಪ್ರದೇಶದಲ್ಲಿ ಸರಕಾರಿ ಕಚೇರಿ ಆವರಣದೊಳಗೆ ನುಸುಳಿದ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡು ಪರಿಣಾಮ 40 ಜನರು ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿ ಮೊಹಮ್ಮದ್ ಖಾಲೀದ್ ಖಾನ್ ವಿವರಿಸಿದ್ದಾರೆ.
ಈ ಬಾಂಬ್ ದಾಳಿಯ ಹಿಂದಿನ ರೂವಾರಿಗಳ ಪತ್ತೆಗಾಗಿ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ಕೈಗೊಂಡಿರುವುದಾಗಿ ಖಾನ್ ತಿಳಿಸಿದ್ದು, ಮೊಹ್ಮಂಡ್ ಪ್ರಾಂತ್ಯದಲ್ಲಿ ಕಾನೂನಿನ ಹಿಡಿತವೇ ಇಲ್ಲದಂತಾಗಿದ್ದು, ಇಲ್ಲಿ ತಾಲಿಬಾನ್ ಮತ್ತು ಅಲ್ ಖಾಯಿದ ಉಗ್ರರ ಪ್ರಭಾವವೇ ಅಧಿಕ ಎಂದು ತಿಳಿಸಿದ್ದಾರೆ.