ಎರಡು ಸರಕಾರಿ ಶಾಲೆಗಳನ್ನು ತಾಲಿಬಾನ್ ಉಗ್ರರು ಧ್ವಂಸಗೊಳಿಸಿರುವ ಘಟನೆ ಪಾಕಿಸ್ತಾನ ವಾಯುವ್ಯ ಭಾಗದ ಬಾಜೌರ್ ಬುಡಕಟ್ಟು ಪ್ರದೇಶದಲ್ಲಿ ಸೋಮವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಬಾಲಕಿಯರ ಮತ್ತು ಬಾಲಕರ ಪ್ರಾಥಮಿಕ ಶಾಲೆಗಳನ್ನು ಸ್ಫೋಟಿಸಿ ಧ್ವಂಸಗೊಳಿಸಿದ್ದು, ಸಾವು-ನೋವಿನ ಬಗ್ಗೆ ಯಾವುದೇ ವರದಿ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರರು ದಾಳಿ ನಡೆಸುವ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ ಎಂದು ಮತ್ತೋರ್ವ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಸರಕಾರಿ ಹೆಣ್ಣು ಮಕ್ಕಳ ಶಾಲೆಗಳನ್ನು ನಡೆಸದಂತೆ ತಾಲಿಬಾನ್ ನಿಷೇಧ ಹೇರಿತ್ತು. ಕಳೆದ ಮೂರು ವರ್ಷಗಳಲ್ಲಿ ಖೈಬೆರ್ ಪಾಕ್ತುಖುವಾ ಪ್ರಾಂತ್ಯ ಮತ್ತು ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರರು ಸುಮಾರು 500 ಶಾಲೆಗಳನ್ನು ಧ್ವಂಸಗೊಳಿಸಿದ್ದಾರೆ.
ಆ ನಿಟ್ಟಿನಲ್ಲಿ ಈ ಭಾಗದ ಸಾವಿರಾರು ಮಕ್ಕಳು ವಿದ್ಯಾಭ್ಯಾಸದಂತೆ ವಂಚಿತರಾಗಿದ್ದಾರೆ. ಆಧುನಿಕ ಶಿಕ್ಷಣ ಪದ್ದತಿ ಇಸ್ಲಾಮ್‌ಗೆ ವಿರೋಧ ಎಂದು ತಾಲಿಬಾನ್ ಆರೋಪವಾಗಿದೆ.