ನಿಕೆಲ್ ಅದಿರನ್ನು ಹೊತ್ತೊಯ್ಯುತ್ತಿದ್ದ ಬಾಂಗ್ಲಾದೇಶದ ಹಡಗನ್ನು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಸೋಮಾಲಿ ಕಡಲ್ಗಳ್ಳರು ಅಪಹರಿಸಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಬಾವುಟ ಹೊಂದಿರುವ ಎಂ.ವಿ.ಜಾಹಾನ್ ಮೋನಿ ಹೆಸರಿನ ಹಡಗು ಸಿಂಗಾಪುರದಿಂದ ಯುರೋಪ್‌ಗೆ ಹೊರಟಿದ್ದ ಸಂದರ್ಭದಲ್ಲಿ ಭಾರತೀಯ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ಅಪಹರಿಸಿರುವುದಾಗಿ ಬಾಂಗ್ಲಾ ಶಿಪ್ಪಿಂಗ್ ಇಲಾಖೆಯ ಮುಖ್ಯಸ್ಥ ಬಾಝೂರ್ ರೆಹಮಾನ್ ವಿವರಿಸಿದ್ದಾರೆ.
ಕಾರ್ಗೋ ಹಡಗಿನಲ್ಲಿ ಸಿಬ್ಬಂದಿಯೊಬ್ಬನ ಪತ್ನಿ ಸೇರಿದಂತೆ ಒಟ್ಟು 25 ಮಂದಿ ಇದ್ದಿರುವುದಾಗಿ ರೆಹಮಾನ್ ವಿವರಿಸಿದ್ದಾರೆ. ಹಡಗಿನಲ್ಲಿ 41 ಟನ್ ನಿಕೆಲ್ ಅದಿರು ಇದ್ದಿರುವುದಾಗಿ ಹೇಳಿದ್ದಾರೆ. ಇದೀಗ ಹಡಗು ಕಡಲ್ಗಳ್ಳರ ವಶದಲ್ಲಿದ್ದು, ಹಡಗು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.