ಚಡಿಏಟು; ಉಗ್ರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪಾಕ್ ಮಹಿಳೆ
ಪೇಶಾವರ, ಮಂಗಳವಾರ, 7 ಡಿಸೆಂಬರ್ 2010( 15:37 IST )
'ತಾಲಿಬಾನ್‌ನ ಮೂವರು ಉಗ್ರರು ತನಗೆ ಚಡಿಏಟು ನೀಡಿರುವುದಾಗಿ' ಆರೋಪಿಸಿ ಮಹಿಳೆಯೊಬ್ಬಳು ಪಾಕಿಸ್ತಾನ ವಾಯುವ್ಯ ಪ್ರದೇಶದ ಸ್ವಾತ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ಅಂಶ ಬೆಳಕಿಗೆ ಬಂದಿದೆ.
ಸ್ವಾತ್ ಜಿಲ್ಲೆಯ ಖೈಬೆರ್ ಪಾಕ್ತುಖುವಾ ಪ್ರದೇಶದ ಡಾಕೋರಾಕ್‌ನ ಮೈರಾಜಾ ಬೀಬಿಗೆ 2008ರ ಡಿಸೆಂಬರ್ ತಿಂಗಳಿನಲ್ಲಿ ತಾಲಿಬಾನ್ ಉಗ್ರರು 30 ಚಡಿಏಟು ನೀಡಿದ್ದರು. ಗಂಡನ ಜೊತೆಗೆ ಹೋಗದೆ ಮಾವನ ಮನೆಯಲ್ಲಿ ಮೈರಾಜ್ ಬೀಬಿ ವಾಸ್ತವ್ಯ ಹೂಡಿರುವುದನ್ನು ಆಕ್ಷೇಪಿಸಿ ತಾಲಿಬಾನ್‌ನ ಮೂರು ಉಗ್ರರು ಆಕೆಗೆ ಚಡಿಏಟಿನ ಶಿಕ್ಷೆ ನೀಡಿದ್ದರು.
ಇದೀಗ ಉಗ್ರರ ವಿರುದ್ಧವೇ ಕೋರ್ಟ್‌ನಲ್ಲಿ ದೂರು ದಾಖಲಿಸುವ ಧೈರ್ಯ ತೋರಿರುವ ಮೈರಾಜಾ, ತನಗೆ ಎಸಾ ಖಾನ್, ಮುಹಮ್ಮದ್ ಅಲಾಂಗಿರ್ ಮತ್ತು ಹಾರೂನ್ ರಶೀದ್ ಎಂಬ ಮೂರು ಉಗ್ರರು ಸುಮಾರು 200 ಮಂದಿ ಗ್ರಾಮಸ್ಥರ ಎದುರಲ್ಲೇ ಚಡಿಏಟು ನೀಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾಳೆ. ಈಗಾಗಲೇ ತಾಲಿಬಾನ್ ಉಗ್ರರ ಥಳಿತ ಪ್ರಕರಣದ ವಿರುದ್ಧ ಇಬ್ಬರು ಮಹಿಳೆಯರು ದೂರು ಸಲ್ಲಿಸಿದ್ದರು. ಮೈರಾಜಾ ಬೀಬಿ ಮೂರನೇ ಮಹಿಳೆಯಾಗಿದ್ದಾಳೆ.