ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ 'ದೊಡ್ಡಣ್ಣ'ನ ನಿದ್ದೆಗೆಡಿಸಿದ್ದ ವಿಕಿಲೀಕ್ಸ್‌ನ ಅಸಾಂಜ್ ಬಂಧನ (WikiLeaks | Julian Assange | London | Sweden | Washington | arrest)
ಸ್ವೀಡನ್‌ನಲ್ಲಿನ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಸ್ಥಾಪಕ ಜುಲಿಯಾನ್ ಅಸಾಂಜ್ ನನ್ನು ಕೊನೆಗೂ ಬ್ರಿಟನ್ ಪೊಲೀಸರು ಮಂಗಳವಾರ ಸೆರೆ ಹಿಡಿದಿರುವುದಾಗಿ ಲಂಡನ್‌ನ ಮೆಟ್ರೋಪೊಲಿಟಿಯನ್ ಪೊಲೀಸ್ ತಿಳಿಸಿದ್ದಾರೆ.
ಅಮೆರಿಕ ಸರಕಾರದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸುವ ಮೂಲಕ ವಿಶ್ವದ 'ದೊಡ್ಡಣ್ಣ'ನ ಕೆಂಗಣ್ಣಿಗೆ ಗುರಿಯಾಗಿದ್ದ ಜೂಲಿಯಾನ್ ಅಸಾಂಜ್ ಈವರೆಗೂ ಬಂಧನದ ಭೀತಿಯನ್ನು ಎದುರಿಸುತ್ತಿದ್ದ. ಇದೀಗ ಅಮೆರಿಕದ ದ್ವಿಮುಖ ನೀತಿಯೂ ಕೂಡ ಬಹಿರಂಗಗೊಂಡಂತಾಗಿದೆ.
ವಿಕಿಲೀಕ್ಸ್ ಮಾಹಿತಿ ಬಹಿರಂಗದ ನಂತರ ಜಾಗತಿಕವಾಗಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ತರುವಾಯ ಸ್ವೀಡನ್‌ನಲ್ಲಿ ಅತ್ಯಾಚಾರ ನಡೆಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ವೀಡನ್ ಪ್ರಾಸಿಕ್ಯೂಟರ್ ದಿಢೀರನೆ ಆಸ್ಟ್ರೇಲಿಯ ಮೂಲದ 39ರ ಹರೆಯದ ಅಸಾಂಜ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದರು.
ಆದರೆ ಇದು ತಾನು ನಿರಪರಾಧಿಯಾಗಿದ್ದು, ಅತ್ಯಾಚಾರದ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾಗಿಯೂ ಅಸಾಂಜೆ ಸ್ಪಷ್ಟನೆ ನೀಡಿದ್ದ. ಇವೆಲ್ಲ ಅಮೆರಿಕದ ಕುತಂತ್ರ ಎಂದು ಆರೋಪಿಸಿದ್ದ. ಏತನ್ಮಧ್ಯೆ ಅಸಾಂಜ್ ರಹಸ್ಯ ಸ್ಥಳದಲ್ಲಿ ಅಡಗಿಕೊಂಡಿದ್ದ. ಆದರೂ ಆತನ ಬಂಧನಕ್ಕೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಷ್ಟೇ ಆತನ ಪರ ವಕೀಲರು, ಅಸಾಂಜೆ ಪೊಲೀಸರ ಎದುರು ಹಾಜರಾಗುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು.
ಅಸಾಂಜೆ ಸ್ವೀಡನ್‌ನಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಬ್ರಿಟನ್ ಪೊಲೀಸರು ಇಂದು ಸೆರೆ ಹಿಡಿದಿದ್ದಾರೆ. ಅಲ್ಲದೇ ಸ್ವೀಡನ್ ಅಸಾಂಜ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ ನಂತರ ನವೆಂಬರ್ 30ರಂದು ಅಸಾಂಜ್ ಅವರನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿಯೂ ಸೇರಿಸಲಾಗಿತ್ತು. ಎಲ್ಲಾ ಆರೋಪಗಳ ನಡುವೆಯೂ ಅಸಾಂಜ್‌ರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿರುವುದು ನೆಪ ಮಾತ್ರಕ್ಕೆ. ಅಮೆರಿಕದ ರಹಸ್ಯ ಮಾಹಿತಿ ಹೊರಹಾಕಿರುವುದೇ ಆತನ ಬಂಧನದ ಹಿಂದಿರುವ ಪ್ರಮುಖ ಉದ್ದೇಶವಾಗಿದೆ ಎಂಬ ಆರೋಪವೂ ದಟ್ಟವಾಗಿ ಕೇಳಿಬರುತ್ತಿದೆ.