ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿ ಬಂಧಿಸಲ್ಪಟ್ಟಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸಾಂಜ್ ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಆಸ್ಟ್ರೇಲಿಯ ವಿದೇಶಾಂಗ ಇಲಾಖೆ ನಿರ್ಧರಿಸಿದೆ.
ಬಂಧಿತ ಅಸಾಂಜ್‌ಗೆ ರಾಜತಾಂತ್ರಿಕ ನೆರವು ನೀಡುವುದಾಗಿ ಆಸ್ಟ್ರೇಲಿಯ ತಿಳಿಸಿದೆ. ಅಸಾಂಜ್ ಅವರ ಕಾನೂನು ಸಮರಕ್ಕೆ ಲಂಡನ್‌ನಲ್ಲಿರುವ ಆಸ್ಟ್ರೇಲಿಯದ ರಾಜತಾಂತ್ರಿಕರು ನೆರವು ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಿವರಿಸಿದೆ.
ವಿದೇಶದಲ್ಲಿ ಆಸ್ಟ್ರೇಲಿಯ ಪ್ರಜೆ ಯಾರೇ ಆಗಿರಲಿ ಬಂಧಿತರಾದರೆ ಅವರಿಗೆ ಬೆಂಬಲ ನೀಡುತ್ತೇವೆ. ಅದೇ ರೀತಿ ಅಸಾಂಜ್‌ಗೂ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುವುದಾಗಿ ವಿದೇಶಾಂಗ ಸಚಿವ ಕೇವಿನ್ ರೂಡ್ ಆಸ್ಟ್ರೇಲಿಯ ಚಾನೆಲ್ 7 ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಅವರನ್ನು ಸ್ವೀಡನ್‌ನಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಲಂಡನ್ ಪೊಲೀಸರು ಮಂಗಳವಾರ ಬಂಧಿಸಿದ್ದರು. ಅಮೆರಿಕಕ್ಕೆ ಸಂಬಂಧಿಸಿದ ಮಹತ್ವದ ರಹಸ್ಯ ದಾಖಲೆಗಳನ್ನು ಹೊರಹಾಕಿದ ನಂತರ ವಿಕಿಲೀಕ್ಸ್ ಬಂಧಿಸುವಂತೆ ಸ್ವೀಡನ್ ಬಂಧನದ ವಾರಂಟ್ ಹೊರಡಿಸಿತ್ತು.