ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆ ಐಎಸ್ಐ 'ದುಷ್ಟ ಏಜೆನ್ಸಿ' ಎಂದು ಪಾಕ್‌ನ ಪರಮಾಣು ವಿಜ್ಞಾನಿ ಎ.ಕ್ಯೂ.ಖಾನ್ ಗಂಭೀರವಾಗಿ ಆರೋಪಿಸಿದ್ದು, ಐಎಸ್ಐ ಸಂಸ್ಥೆ ಆರ್ಮಿ ವರಿಷ್ಠರ ಆದೇಶವನ್ನು ಪಾಲಿಸುತ್ತದೆಯೇ ಹೊರತು ಸರಕಾರದ್ದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಐಎಸ್ಐ ನ್ಯಾಯಾಲಯದ ಆದೇಶವನ್ನೂ ಧಿಕ್ಕರಿಸಿ ಕಾರ್ಯಾಚರಿಸುತ್ತಿದೆ ಎಂದು ದೂರಿದ ಖಾನ್, ಐಎಸ್ಐ ಸರ್ವಾಧಿಕಾರವನ್ನೇ ಪೋಷಿಸುತ್ತಿದೆ ಎಂದರು.
ದಿವಂಗತ ಸರ್ವಾಧಿಕಾರಿ ಅಯೂಬ್ ಖಾನ್ ಅವರಿಂದ ಹಿಡಿದು ಹಲವು ಮಿಲಿಟರಿ ವರಿಷ್ಠರು ದೇಶದ ಗದ್ದುಗೆ ಏರಲು ಅವಕಾಶ ಮಾಡಿಕೊಟ್ಟಿದೆ ಎಂಬುದಾಗಿ ಖಾನ್ ಅವರು ದಿ ನ್ಯೂಸ್ ದೈನಿಕದ ಅಂಕಣದಲ್ಲಿ ವಿವರಿಸಿದ್ದಾರೆ. ಹಾಗಾಗಿ ಐಎಸ್ಐ ಈಗಲೂ ಸರ್ವಾಧಿಕಾರಿಯನ್ನೇ ತನ್ನ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಐಎಸ್ಐ ಒಂದು ದುಷ್ಟ ಸಂಸ್ಥೆ ಎಂಬುದಾಗಿ ಲೇಖನದಲ್ಲಿ ಹೀಗಳೆದಿದ್ದಾರೆ.
ದೇಶದಲ್ಲಿ ಗುಪ್ತಚರ ಇಲಾಖೆ ಕಾನೂನು ಬಾಹಿರವಾಗಿ ಕಾರ್ಯಾಚರಿಸುವ ಮೂಲಕ ನ್ಯಾಯಾಂಗವನ್ನೂ ಕಡೆಗಣಿಸುತ್ತಿದೆ. ಒಟ್ಟಾರೆಯಾಗಿ ನ್ಯಾಯಾಲಯದ ಆದೇಶವನ್ನೂ ಕೂಡ ಅದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.