ಇಸ್ಲಾಮಾಬಾದ್, ಗುರುವಾರ, 9 ಡಿಸೆಂಬರ್ 2010( 15:31 IST )
ಅಫ್ಘಾನಿಸ್ತಾನದಲ್ಲಿ ಭಾರತ ತನ್ನ ಛಾಪು ಮೂಡಿಸಲು ಯತ್ನಿಸುತ್ತಿರುವುದನ್ನು ಕಡಿಮೆ ಮಾಡಬೇಕು. ಅಷ್ಟೇ ಅಲ್ಲ ಬಲೂಚಿಸ್ತಾನ ವಿಷಯದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕೆಂದು ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಮೆರಿಕದ ಪ್ರಮುಖ ಸಚಿವರೊಬ್ಬರಲ್ಲಿ ಹೇಳಿರುವುದಾಗಿ ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆಯಿಂದ ತಿಳಿದು ಬಂದಿದೆ.
2010ರ ಫೆಬ್ರುವರಿ 16ರಂದು ಪ್ರಧಾನಿ ಗಿಲಾನಿ ಮತ್ತು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸೆನೆಟ್ ಸಮಿತಿಯ ಅಧ್ಯಕ್ಷ ಜಾನ್ ಕೆರ್ರೈ ಅವರ ಜೊತೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದಾಗಿ ವಿಕಿಲೀಕ್ಸ್ ಬಹಿರಂಗಪಡಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.
ಅಲ್ಲದೇ ಭಾರತದ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸಾಕಷ್ಟು ಶ್ರಮವಹಿಸುತ್ತಿರುವುದಾಗಿ ಗಿಲಾನಿ ಈ ಸಂದರ್ಭದಲ್ಲಿ ಹೇಳಿದ್ದರು. ಆದರೆ ಭಾರತ ಬಲೂಚಿಸ್ತಾನದ ವಿಷಯದಲ್ಲಿ ಮೂಗು ತೂರಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿರುವುದಾಗಿ ವಿಕಿಲೀಕ್ಸ್ ಹೊರಹಾಕಿದೆ.
ಹಾಗಾಗಿ ಭಾರತ ಪಾಕಿಸ್ತಾನದ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಬಲೂಚಿಸ್ತಾನದಲ್ಲಿ ಭಾರತ ಉಗ್ರರನ್ನು ಬೆಂಬಲಿಸುತ್ತಿರುವುದನ್ನು ಕೈಬಿಡಬೇಕು ಎಂದು ಗಿಲಾನಿ ಒತ್ತಾಯಿಸಿದ್ದರು.