ಗಲ್ಫ್ ರಾಷ್ಟ್ರಗಳಲ್ಲಿ ನೇಪಾಳ ಮಹಿಳೆಯರ ನೌಕರಿಗೆ ಗ್ರೀನ್ ಸಿಗ್ನಲ್
ಕಾಠ್ಮಂಡು, ಗುರುವಾರ, 9 ಡಿಸೆಂಬರ್ 2010( 16:22 IST )
ಗಲ್ಫ್ ರಾಷ್ಟ್ರಗಳಿಗೆ ಮಹಿಳೆಯರು ತೆರಳುವ ವಿರುದ್ಧ ವಿಧಿಸಿದ್ದ ನಿಷೇಧವನ್ನು ನೇಪಾಳ ಸರಕಾರ ರದ್ದುಪಡಿಸಿದ್ದು, ಆ ನಿಟ್ಟಿನಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಹೊಸ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ನೇಪಾಳದ ಉದ್ಯೋಗ ಸಚಿವಾಲಯ ತಿಳಿಸಿದೆ.
ಜೀವನೋಪಾಯಕ್ಕಾಗಿ ಸಾವಿರಾರು ಮಂದಿ ನೇಪಾಳಿ ಮಹಿಳೆಯರು ಮಲೇಷ್ಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಪ್ರತಿವರ್ಷ ತೆರಳುತ್ತಿದ್ದರು. ಆದರೆ 1998ರಲ್ಲಿ ಮನೆಗೆಲಸ ಮಾಡಲು ಮಹಿಳೆಯರು ಸೌದಿ ಅರೇಬಿಯ, ಕುವೈಟ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಕತಾರ್‌ಗೆ ತೆರಳದಂತೆ ನೇಪಾಳ ನಿಷೇಧ ಹೇರಿತ್ತು.
ಆದರೆ ಇದೀಗ ಮಹಿಳೆಯರು ವಿದೇಶದಲ್ಲಿ ಕೆಲಸ ಮಾಡಲು ಹೇರಿದ್ದ ನಿಷೇಧ ರದ್ದುಗೊಳಿಸಿದ್ದು, ಆ ನಿಟ್ಟಿನಲ್ಲಿ ನೇಪಾಳಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರಿಗೆ ಇನ್ಸೂರೆನ್ಸ್, ವಸತಿ, ರಕ್ಷಣೆ ಹಾಗೂ ಮೂಲ ಸಂಬಳ ನೀಡುವ ಬಗ್ಗೆ ವಿದೇಶಗಳು ಒಪ್ಪಿಕೊಳ್ಳಬೇಕು. ಈ ಬಗ್ಗೆ ನೇಪಾಳ ರಾಯಭಾರಿ ಕಚೇರಿ ವ್ಯವಹಾರ ನಡೆಸಲಿದೆ ಎಂದು ಸಚಿವಾಲಯದ ವಕ್ತಾರ ಪೂರ್ಣಚಂದ್ರಾ ಭಟ್ಟಾರೈ ತಿಳಿಸಿದ್ದಾರೆ.