ಇಸ್ಲಾಮಾಬಾದ್, ಶುಕ್ರವಾರ, 10 ಡಿಸೆಂಬರ್ 2010( 13:01 IST )
ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ಸಕ್ಕರೆ ಉಪಯೋಗಿಸಬಾರದು ಎಂದು ಪಂಜಾಬ್ ಪ್ರಾಂತ್ಯ ಹೊರಡಿಸಿದ್ದ ನಿಷೇಧದ ಬಗ್ಗೆ ವಿವರಣೆ ನೀಡುವಂತೆ ಪಾಕಿಸ್ತಾನ ಕೋರ್ಟ್ ಗುರುವಾರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಕ್ಕರೆ ಉಪಯೋಗಿಸಲು ನಿಷೇಧ ಹೇರಿರುವ ವಿರುದ್ಧ ವಕೀಲ ಮುಹಮ್ಮದ್ ಅಜ್‌ಹಾರ್ ಸಿದ್ದಿಕಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ನ್ಯಾಯಾಧೀಶ ಅಜ್ಮಾತ್ ಶೇಕ್ ನೋಟಿಸ್ ಜಾರಿ ಮಾಡಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಸಕ್ಕರೆ ಬಳಕೆ ಮಾಡಬಾರದೆಂದು ಮುಖ್ಯಮಂತ್ರಿ ಶಾಬಾಜ್ ಶರೀಫ್ ಹೊರಡಿಸಿರುವ ಆದೇಶ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಸಿದ್ದಿಕಿ ಅರ್ಜಿಯಲ್ಲಿ ದೂರಿದ್ದಾರೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಜನವರಿ 18 ವಿಚಾರಣೆ ವೇಳೆ ವಿವರಣೆ ನೀಡಬೇಕೆಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಅದೇ ರೀತಿ ಸಕ್ಕರೆ ಬೆಲೆಯನ್ನು ನಿಯಂತ್ರಣಕ್ಕೆ ತರಲು ಯಾಕೆ ವಿಫಲರಾಗಿದ್ದೀರಿ ಎಂಬ ಬಗ್ಗೆಯೂ ವಿವರಣೆ ನೀಡುವಂತೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ರೀತಿ ಏಕಾಏಕಿ ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ ಎಂದು ನಿಷೇಧ ಹೇರುವುದು ಜನರ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.ಹಾಗಾದರೆ ಸರಕಾರ ನಾಳೆ ಮತ್ತೊಂದು ಆಹಾರ ಬಳಕೆ ಮೇಲೂ ನಿಷೇಧ ಹೇರಬಹುದು ಎಂದು ಸಿದ್ದಿಕಿ ಅರ್ಜಿಯಲ್ಲಿ ವಿವರಿಸಿದ್ದಾರೆ.
ಪಂಜಾಬ್‌ನಾದ್ಯಂತ ಈಗಾಗಲೇ ಸಕ್ಕರೆ ಕಿಲೋಗೆ 92 ರೂಪಾಯಿ ಆಗಿದೆ. ಅಷ್ಟೇ ಅಲ್ಲ ಪಾಕಿಸ್ತಾನದ ಕೆಲವೆಡೆ ಬೆಲೆ ಇನ್ನೂ ಹೆಚ್ಚಳವಾಗಿದೆ. ಆದರೂ ಸರಕಾರ ಬೆಲೆ ಇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.