ಧರ್ಮನಿಂದೆ ಕಾಯ್ದೆ ತಿದ್ದುಪಡಿ ಮಾಡಿದ್ರೆ ಹುಷಾರ್:ಪಾಕ್‌ಗೆ ಜಮಾತ್
ಪೇಶಾವರ, ಶುಕ್ರವಾರ, 10 ಡಿಸೆಂಬರ್ 2010( 15:35 IST )
ಪಾಕಿಸ್ತಾನ ಸರಕಾರ ಯಾವುದೇ ಕಾರಣಕ್ಕೂ ವಿವಾದಿತ ಧರ್ಮನಿಂದನಾ ಕಾನೂನನ್ನು ಬದಲಾವಣೆ ಮಾಡಬಾರದು ಎಂದು ಜಮಾತ್ ಉಲೇಮಾ ಇ ಇಸ್ಲಾಮ್ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದೆ.
ಸರಕಾರ ಧರ್ಮನಿಂದನಾ ಕಾಯ್ದೆಯಲ್ಲಿ ಬದಲಾವಣೆ ತರಲು ಮುಂದಾಗಬಾರದು ಎಂದು ಜೆಯುಐನ ಮೌಲಾನಾ ಸ್ಯಾಮ್ಯುಲ್ ಹಕ್ ಮನವಿ ಮಾಡಿಕೊಂಡಿದ್ದಾರೆ. ಧರ್ಮನಿಂದನಾ ಕಾಯ್ದೆಯ ಬದಲಾವಣೆ ಕುರಿತು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಕ್ಷ ಮುಂದಾದರೆ ಇದು ಆ ಪಕ್ಷದ ರಾಜಕೀಯದ ಕೊನೆಯ ಅಧ್ಯಾಯವಾಗಲಿದೆ ಎಂದು ಹಕ್ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಧರ್ಮನಿಂದನಾ ಕಾನೂನಿಗೆ ತಿದ್ದುಪಡಿ ತರಬೇಕೆಂದು ಪಾಕಿಸ್ತಾನದ ನಾಗರಿಕ ಹಕ್ಕು ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ತೀವ್ರ ಒತ್ತಡ ಹೇರಿವೆ. ಕಳೆದ ತಿಂಗಳಷ್ಟೇ ಧರ್ಮನಿಂದನಾ ಕಾಯ್ದೆಯಡಿಯಲ್ಲಿ ಕ್ರಿಶ್ಚಿಯನ್ ಮಹಿಳೆಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಇದು ಕೂಡ ಪಾಕ್‌ನಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿತ್ತು.
ಏತನ್ಮಧ್ಯೆ ಧರ್ಮನಿಂದನಾ ಕಾಯ್ದೆ ತಿದ್ದುಪಡಿಯ ಮಸೂದೆಯನ್ನು ಪಿಪಿಪಿಯ ಹಿರಿಯ ಮುಖಂಡ ಶೆರ್ರೈ ರೆಹಮಾನ್ ಸಂಸತ್‌ನಲ್ಲಿ ಮಂಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಧಾರ್ಮಿಕ ಸಂಘಟನೆಗಳು ಹಾಗೂ ಮೌಲ್ವಿಗಳು ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.