ಜಗತ್ತಿನಾದ್ಯಂತ ಪ್ರತಿ ನಾಲ್ಕು ಜನರಲ್ಲಿ ಒಬ್ಬ ತನ್ನ ಕೆಲಸ ಮಾಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಲಂಚ ಕೊಟ್ಟೇ ತನ್ನ ಕೆಲಸ ಮಾಡಿಸಿಕೊಳ್ಳುತ್ತಾನೆ. ಆದೇ ರೀತಿ ಶೇ.54ರಷ್ಟು ಭಾರತೀಯರು ಸಂಬಂಧಪಟ್ಟ ವ್ಯಕ್ತಿಯ 'ಕೈ' ಬೆಚ್ಚಗೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವಾದ ಗುರುವಾರದಂದು ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಜಗತ್ತಿನ 86 ದೇಶಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಲಂಚ ನೀಡುವುದರಲ್ಲಿ ಭಾರತ 9ನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಲಂಚ ಪಡೆಯುತ್ತಿರುವವರಲ್ಲಿ ಪೊಲೀಸರೇ ಮೊದಲಿಗರಾಗಿದ್ದಾರಂತೆ. ಶೇ.29 ಮಂದಿ ಪೊಲೀಸರಿಗೆ ಲಂಚ ನೀಡಿಯೇ ಕೆಲಸ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
2010ರಲ್ಲಿ ಅತಿ ಹೆಚ್ಚು ಲಂಚದ ವ್ಯವಹಾರ ನಡೆಸಿರುವ ದೇಶಗಳಲ್ಲಿ ಅಫ್ಘಾನಿಸ್ತಾನ (ಶೇ.61), ಕಾಂಬೋಡಿಯ (84), ಭಾರತ(ಶೇ.54), ಇರಾಕ್ (ಶೇ.56), ನೈಜೀರಿಯಾ (ಶೇ.63), ಸೆನೆಗಾಲ್(ಶೇ.56), ಲಿಬೇರಿಯಾ(ಶೇ.89), ಸಿಯೆರ್ರಾ ಲಿಯೋನ್ (ಶೇ.56) ಮತ್ತು ಉಗಾಂಡ (ಶೇ.86) ಸೇರಿವೆ.