ಬ್ರಿಟನ್: ಸರ್ ನೀವು...ಗರ್ಭಿಣಿಯಾಗಿದ್ದೀರಿ; ಅವಳಿ ಮಕ್ಕಳು!
ಲಂಡನ್, ಶನಿವಾರ, 11 ಡಿಸೆಂಬರ್ 2010( 12:21 IST )
'ನೀವು ಗರ್ಭಿಣಿಯಾಗಿದ್ದೀರಿ...ಅಷ್ಟೇ ಅಲ್ಲ ಅವಳಿ ಮಕ್ಕಳು ಜನಿಸಲಿವೆ. ಹಾಗಾಗಿ ನೀವು ಮತ್ತೊಮ್ಮೆ ಆಸ್ಪತ್ರೆಗೆ ಬಂದು ಸ್ಕ್ಯಾನ್ ಮಾಡಿಸಿಕೊಳ್ಳಿ' ಎಂದು ಆಸ್ಪತ್ರೆಯೊಂದು ಬರೆದಿರುವ ಪತ್ರನ್ನೊದಿದವರು ದಂಗು ಬಡಿದು ಹೋಗಿದ್ದರು. ಯಾಕೆ ಗೊತ್ತಾ? ಆ ವ್ಯಕ್ತಿ ಮಹಿಳೆ ಆಗಿರಲಿಲ್ಲ, ಪುರುಷನಾಗಿದ್ದ!
ಬ್ರಿಟನ್‌ನ ಹಿಲ್ಟನ್ ಪ್ಲೆಟ್ಟೆಲ್ಲ್ (50) ಎಂಬ ವ್ಯಕ್ತಿಗೆ ನೋರ್‌ಫೋಕ್ ಮತ್ತು ನೋರ್‌ವಿಚ್ ಯೂನಿವರ್ಸಿಟಿಯ ಎಎಚ್‌ಎಸ್ ಆಸ್ಪತ್ರೆಯಿಂದ ಬಂದ ಪತ್ರ ಓದಿ ಕಕ್ಕಾಬಿಕ್ಕಿಯಾಗಿದ್ದರಂತೆ. ನೀವು ಗರ್ಭಿಣಿಯಾಗಿದ್ದು, ಈಗಾಗಲೇ ಮಾಡಿಸಿರುವ ಸ್ಕ್ಯಾನ್‌ನ ವರದಿಯಂತೆ ಅವಳಿ ಮಕ್ಕಳು ಇವೆ. ಹಾಗಾಗಿ ಇದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗೆ ಬಂದು ಮತ್ತೊಮ್ಮೆ ಸ್ಕ್ಯಾನ್ ತಪಾಸಣೆಗೆ ಒಳಗಾಗಬೇಕೆಂದು ಪತ್ರದಲ್ಲಿ ವಿವರಿಸಿದ್ದರು.
'ಇದೊಂದು ನಿಜಕ್ಕೂ ನನಗೆ ಗಾಬರಿ ತರುವ ವಿಚಾರವೇ ಆಗಿತ್ತು. ಹಾಗಾಗಿ ನಾನು ನನ್ನ ಹೊಟ್ಟೆಯ ಮೇಲೆ ಕೈಯಾಡಿಸಿ ನೋಡಿಕೊಂಡೆ' ಎಂದು ಹೇಳಿರುವ ಹಿಲ್ಟನ್ ಈ ಬಗ್ಗೆ ತನ್ನ ಸಹಪಾಠಿಗಳಿಗೆ ವಿಷಯ ತಿಳಿಸಿದಾಗ ಅವರೆಲ್ಲ ಗಹಗಹಿಸಿ ನಕ್ಕುಬಿಟ್ಟಿರುವುದಾಗಿ ಅವರು ತಿಳಿಸಿದ್ದಾರೆಂದು ಸ್ಕೈ ನ್ಯೂಸ್ ವರದಿ ಮಾಡಿದೆ.
ಆಸ್ಪತ್ರೆಯಿಂದ ತನಗೆ ಬಂದಿರುವ ಪತ್ರದಲ್ಲಿ ನನ್ನ ಹೆಸರು, ಜನ್ಮ ದಿನಾಂಕ ಮತ್ತು ಇನ್ಸೂರೆನ್ಸ್ ಸಂಖ್ಯೆ ಸರಿಯಾಗಿಯೇ ಇದೆ. ಆದರೂ ಇದೊಂದು ಪ್ರಮಾದದಿಂದ ಆಗಿರುವ ಎಡವಟ್ಟು ವಿನಃ ಬೇರೇನೂ ಅಲ್ಲ ಎಂದು ಹಿಲ್ಟನ್ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ವಿಷಯ ಗೆಳೆಯರು, ಸಂಬಂಧಿಗಳಿಗೆ ಬಹಿರಂಗಗೊಂಡಿದ್ದರಿಂದ ಅವರ ಹೋದಲ್ಲೆಲ್ಲ, ಓಹ್...ಗರ್ಭಿಣಿ ಬರುತ್ತಿದ್ದಾಳೆ(ರೆ) ನೋಡಿ ಎಂದು ಹಾಸ್ಯ ಚಟಾಕಿ ಹಾರಿಸುತ್ತಿರುವುದಾಗಿ ಅವರು ಅಲವತ್ತುಕೊಂಡಿದ್ದಾರೆ.