ಚೀನಾದ ಪ್ರಜಾಪ್ರಭುತ್ವ ಹೋರಾಟಗಾರ, ಬಂಡುಕೋರ ನಾಯಕ ಲಿಯು ಕ್ಸಿಯಾಬೋ ಅವರ ಅನುಪಸ್ಥಿತಿಯಲ್ಲಿಯೇ ಶುಕ್ರವಾರ ನಡೆದ ಸಮಾರಂಭದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಲಿಯು ಆ ಪ್ರಶಸ್ತಿಯನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ, ಬದಲಾಗಿ ಖಾಲಿ ಕುರ್ಚಿಯ ಮೇಲೆ ಪ್ರಶಸ್ತಿಯನ್ನು ಇಟ್ಟು ಸಮಾರಂಭ ನಡೆಸಲಾಯಿತು.
ಸುಮಾರು 75 ವರ್ಷಗಳ ನಂತರ ಈ ಘಟನೆ ಪುನರಾವರ್ತನೆಯಾಗಿದೆ. 1935ರಲ್ಲಿ ಜರ್ಮನಿಯ ಕಾರ್ಲ್ ವೊನ್ ಒಸ್ಸೈಜಾಕೈ ಅವರಿಗೂ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ಹಾಗೂ ಆತನ ನಾಜಿ ಪಕ್ಷದ ವಿರುದ್ಧ ತನ್ನದೇ ಸಣ್ಣ ಗುಂಪಿನೊಂದಿಗೆ ವಿರೋಧ ವ್ಯಕ್ತಪಡಿಸತೊಡಗಿದ್ದರು. ಹಾಗಾಗಿ ಕಾರ್ಲ್ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮತೊಡಗಿದ್ದರು. ತದನಂತರ 1933ರಲ್ಲಿ ಕಾರ್ಲ್ ಅವರನ್ನು ಹಿಟ್ಲರ್ ಬಂಧಿಸಿದ್ದ, ಅಷ್ಟೇ ಅಲ್ಲ ನೊಬೆಲ್ ಪ್ರಶಸ್ತಿ ಸ್ವೀಕರಿಸಲು ಅವರಿಗೆ ಅವಕಾಶ ಕೊಡವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದ. ಆ ನಿಟ್ಟಿನಲ್ಲಿ 1935ರಲ್ಲಿಯೂ ಓಸ್ಲೋದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಲ್ ಗೈರು ಹಾಜರಿಯಲ್ಲಿಯೇ ಖಾಲಿ ಕುರ್ಚಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಚೀನಾದ ಕರೆಗೆ ಓಗೊಟ್ಟು ಪಾಕಿಸ್ತಾನ, ರಷ್ಯ ಸೇರಿದಂತೆ 15 ರಾಷ್ಟ್ರಗಳು ಗೈರು ಹಾಜರಾಗಿದ್ದವಾದರೂ, ಭಾರತವೂ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಈ ಸಮಾರಂಭ ನಡೆಯಿತು.
ಬೀಜಿಂಗ್ ಆಡಳಿತಗಾರರು ಅಪರಾಧಿ ಎಂದು ತೀರ್ಮಾನಿಸಿ ಸೆರೆಮನೆಗೆ ತಳ್ಳಿರುವ ಲಿಯು ಅವರನ್ನು ಈ ಸಮಾರಂಭದಲ್ಲಿ ಮಾನವ ಹಕ್ಕುಗಳ ಹರಿಕಾರ ಎಂದು ಬಣ್ಣಿಸಲಾಯಿತು. ಹನ್ನೊಂದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿ ಬಂಧನದಲ್ಲಿರುವ ಲಿಯು ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲವಾದ ಕಾರಣ ‘ಖಾಲಿ ಕುರ್ಚಿ’ಯನ್ನಿಟ್ಟು ಸಮಾರಂಭ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವುದಾಗಿಯೂ ಈ ಸಂದರ್ಭದಲ್ಲಿ ವಿವರಣೆ ನೀಡಿದರು.
ನೊಬೆಲ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಥೊರ್ಜೊನ್ ಜಾಗ್ಲೆಂಡ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಲಿಯು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ತಕ್ಷಣ ಬಂಧಮುಕ್ತ ಗೊಳಿಸುವುದು ಸೂಕ್ತ ಎಂದು ಚೀನಾಕ್ಕೆ ಆಗ್ರಹಿಸಿದರು.
ಚೀನಾದ ಬೆದರಿಕೆಯ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನ, ಅಲ್ಜೀರಿಯಾ, ಕೊಲಂಬಿಯಾ, ಕ್ಯೂಬಾ, ಈಜಿಪ್ಟ್, ಇರಾಕ್, ಇರಾನ್, ಕಜಕಿಸ್ತಾನ, ಮೊರಾಕೊ, ಪಾಕಿಸ್ತಾನ, ರಷ್ಯ, ಸೌದಿ ಅರೇಬಿಯಾ, ಶ್ರೀಲಂಕಾ, ಸೂಡಾನ್, ಟ್ಯುನೇಷಿಯಾ, ವೆಜಿಜುವೆಲಾ ಮತ್ತು ವಿಯೆಟ್ನಾಂಗಳು ಗೈರು ಹಾಜರಾಗಿದ್ದರೆ, ಭಾರತ ಈ ಸಮಾರಂಭದಲ್ಲಿ ಗೈರು ಹಾಜರಾಗುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದ್ದರೂ ಕೂಡ ಚೀನಾದ ಆಕ್ಷೇಪದ ನಡುವೆ ಪಾಲ್ಗೊಂಡಿತ್ತು.