26/11 ದಾಳಿಕೋರರನ್ನು ಸೆರೆ ಹಿಡಿದು ಶಿಕ್ಷಿಸಿ: ಪಾಕ್‌ಗೆ ಯುರೋಪ್
ಬ್ರುಸ್ಸೆಲ್ಸ್, ಶನಿವಾರ, 11 ಡಿಸೆಂಬರ್ 2010( 16:23 IST )
ಮುಂಬೈ ಭಯೋತ್ಪಾದನಾ ದಾಳಿಕೋರರನ್ನು ಪಾಕಿಸ್ತಾನ ಸೆರೆ ಹಿಡಿಯುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಯುರೋಪಿಯನ್ ಒಕ್ಕೂಟ ಆಗ್ರಹಿಸಿದ್ದು, ಆ ನಿಟ್ಟಿನಲ್ಲಿ ಉಗ್ರರಿಗೆ ಯಾರು ರಕ್ಷಣೆ ನೀಡುತ್ತಿದ್ದಾರೆಂಬ ಅಂಶ ಬಹಿರಂಗವಾಗಲಿ ಎಂದು ತಿಳಿಸಿದೆ.
ಭಾರತ ಮತ್ತು ಯುರೋಪಿಯನ್ ಒಕ್ಕೂಟದ 11ನೇ ಶೃಂಗಸಭೆಯ ನಂತರ ಬಿಡುಗಡೆ ಮಾಡಿದ ಜಂಟಿಹೇಳಿಕೆಯಲ್ಲಿ, ಮುಂಬೈ ದಾಳಿಗೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನ ಸೆರೆ ಹಿಡಿದು, ಶಿಕ್ಷಿಸಬೇಕು ಎಂದು ಹೇಳಿದೆ.
ಆದರೆ ಭಯೋತ್ಪಾದಕರಿಗೆ ಯಾರೂ ರಕ್ಷಣೆ ನೀಡುತ್ತಿಲ್ಲ ಎಂಬುದಾಗಿಯೇ ಜಗತ್ತಿನ ಎಲ್ಲಾ ದೇಶಗಳು ಸಾರುತ್ತಲೇ ಇವೆ ಎಂದು ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಆರೋಪಿಸಿರುವ ಯುರೋಪಿಯನ್ ಒಕ್ಕೂಟ. ತನಿಖೆಯಿಂದ ಉಗ್ರರಿಗೆ ಯಾರ ಕೃಪಾಕಟಾಕ್ಷ ಇದೆ ಎಂಬುದು ಜಗಜ್ಜಾಹೀರಾಗಲಿ ಎಂದು ತಿಳಿಸಿದೆ.
ಮುಂಬೈ ದಾಳಿ ಪ್ರಕರಣ ಕುರಿತಂತೆ ಇದೇ ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟ ಬಹಿರಂಗವಾಗಿ ಹೇಳಿಕೆ ನೀಡಿ, ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದೆ.