ದಕ್ಷಿಣ ಅಫ್ಘಾನಿಸ್ತಾನದ ರಸ್ತೆ ಸಮೀಪ ತಾಲಿಬಾನ್ ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಿಸಿದ ಪರಿಣಾಮ ಸುಮಾರು 15 ಜನರು ಸಾವನ್ನಪ್ಪಿರುವ ಘಟನೆ ಸಂಭವಿಸಿರುವುದಾಗಿ ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಮಾರುಕಟ್ಟೆಗೆ ಟ್ರಕ್ವೊಂದರಲ್ಲಿ ಶುಕ್ರವಾರ ಸಂಜೆ ಗ್ರಾಮಸ್ಥರು ಬರುತ್ತಿದ್ದ ವೇಳೆ ಟ್ರಕ್ ಚಕ್ರ ಬಾಂಬ್ ಮೇಲೆ ಹಾದು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರ ದಾವುದ್ ಅಹ್ಮದಿ ವಿವರಿಸಿದ್ದಾರೆ.
ಇದೊಂದು ಪ್ರಬಲ ಬಾಂಬ್ ಸ್ಫೋಟವಾಗಿದ್ದು, ಟ್ರಕ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದು, ಸಾವನ್ನಪ್ಪಿದವರೆಲ್ಲ ಪುರುಷರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದೀಗ ದಕ್ಷಿಣ ಪ್ರಾಂತ್ಯದ ಹೆಲ್ಮಾಂಡ್ ಮತ್ತು ಕಂದಾಹಾರ್ ಪ್ರದೇಶಗಳಲ್ಲಿ ನ್ಯಾಟೋ ಪಡೆ ಉಗ್ರರನ್ನು ಬಗ್ಗು ಬಡಿಯುವ ಕಾರ್ಯದಲ್ಲಿ ನಿರತವಾಗಿದೆ. ಆದರೂ ತಾಲಿಬಾನ್ ಉಗ್ರರ ದಾಳಿ ಎಂದಿನಂತೆ ಮುಂದುವರಿದಿದೆ.