ನೇಪಾಳದಲ್ಲಿನ ರಾಜಪ್ರಭುತ್ವವನ್ನು ಕಿತ್ತೊಗೆದ ಪರಿಣಾಮ, ತಮ್ಮ ಪಿತ್ರಾರ್ಜಿತ ಹಕ್ಕು ಕಳೆದುಕೊಳ್ಳುವಂತಾಗಿದೆ. ಅಲ್ಲದೇ ದೇಶದಲ್ಲಿ ರಾಜಪ್ರಭುತ್ವ ತೊಲಗಿ ಜಾತ್ಯತೀತ ಪ್ರಜಾಪ್ರಭುತ್ವ ಸ್ಥಾಪಿಸಲು ತಂದೆ (ದಿ.ಗಿರಿಜಾಪ್ರಸಾದ್ ಕೊಯಿರಾಲಾ) ಪ್ರಮುಖ ಪಾತ್ರ ವಹಿಸಿದ್ದಾರೆಂದು ಆರೋಪಿಸಿ ಮಾಜಿ ರಾಜಕುಮಾರ ಪರಾಸ್ ಉಪ ಪ್ರಧಾನಿ ಸುಜಾತ ಕೊಯಿರಾಲ ವಿರುದ್ಧ ಗನ್ ತೋರಿಸಿ ಬೀದಿ ರಂಪಾಟ ನಡೆಸಿದ ಘಟನೆ ನಡೆದಿದೆ.
39ರ ಹರೆಯದ ಮಾಜಿ ಪ್ಲೇಬಾಯ್, ನಟೋರಿಯಸ್ ಜೀವನ ಶೈಲಿಯಿಂದಲೇ ಈ ಹಿಂದೆ ಸಾಕಷ್ಟು ವಿವಾದಕ್ಕೊಳಗಾಗಿದ್ದ ಮಾಜಿ ರಾಜಕುಮಾರ ಪರಾಸ್. ಶನಿವಾರ ತಡರಾತ್ರಿ ರಾಜಪ್ರಭುತ್ವದ ಅಳಿವಿನ ವಿಚಾರದಲ್ಲಿ ಇಬ್ಬರ ನಡುವೆ ಪ್ರಚೋದನಾಕಾರಿ ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಪರಾಸ್ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಒಡ್ಡಿದ್ದ.
ಶನಿವಾರ ದಕ್ಷಿಣ ನೇಪಾಳದ ಚಿತ್ವಾನ್ ಜಿಲ್ಲೆಯಲ್ಲಿ ಎಲಿಫೆಂಟ್ ಪೋಲೋ ಟೂರ್ನ್‌ಮೆಂಟ್ ಅನ್ನು ಉಭಯ ಕುಟುಂಬಗಳು ವೀಕ್ಷಿಸಲು ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವೆಯಾಗಿರುವ ಸುಜಾತಾ ಕೊಯಿರಾಲಾ ಬಾಂಗ್ಲಾದೇಶ ಮೂಲದ ಪತಿ ರುಬೆಲ್ ಚೌಧುರಿ ಹಾಗೂ 4 ವರ್ಷದ ಪುತ್ರನ ಜತೆ ಇದ್ದಾಗಲೇ ಮಾಜಿ ರಾಜಕುಮಾರ ಪರಾಸ್,ಮಾತಿನ ಚಕಮಕಿ ನಡೆದಿತ್ತು. ಆಗ ಸಹನೆ ಕಳೆದುಕೊಂಡ ಪರಾಸ್, ಗನ್ ಹೊರತೆಗೆದು ಕೊಲ್ಲುವ ಬೆದರಿಕೆ ಒಡ್ಡಿದ್ದ ಎಂದು ಮಾಧ್ಯಮದ ವರದಿ ತಿಳಿಸಿದೆ.