ಧರ್ಮನಿಂದೆ; ಕ್ರಿಶ್ಚಿಯನ್ ಮಹಿಳೆ ಆಯ್ತು ಈಗ ಪಾಕ್ ವೈದ್ಯನ ಸೆರೆ
ಕರಾಚಿ, ಸೋಮವಾರ, 13 ಡಿಸೆಂಬರ್ 2010( 16:34 IST )
ಧರ್ಮನಿಂದನಾ ಕಾಯ್ದೆ ಕುರಿತಂತೆ ಪಾಕಿಸ್ತಾನದಾದ್ಯಂತ ವಾದ-ವಿವಾದ ನಡೆಯುತ್ತಿರುವ ಬೆನ್ನಲ್ಲೇ, ಮೆಡಿಕಲ್ ರೆಪ್ರೆಸೆಂಟೇಟಿವ್ ಒಬ್ಬರ ವಿಸಿಟಿಂಗ್ ಕಾರ್ಡ್‌ನಲ್ಲಿ ಮೊಹಮ್ಮದ್ ಹೆಸರು ಇರುವುದನ್ನು ಗಮನಿಸಿ ಅದನ್ನು ಎಸೆದಿರುವ ಹಿನ್ನೆಲೆಯಲ್ಲಿ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ದೇಶದಲ್ಲಿನ ವಿವಾದಿತ ಧರ್ಮನಿಂದನಾ ಪ್ರಕರಣಕ್ಕೆ ಹೊಸ ಸೇರ್ಪಡೆಯಾಗಿದೆ. ಪ್ರವಾದಿ ಮೊಹಮ್ಮದ್ ಅವರ ಹೆಸರಿಗೆ ಅವಮಾನ ಮಾಡಿರುವುದಾಗಿ ಆರೋಪಿಸಿ ಮುಸ್ಲಿಮ್ ವೈದ್ಯ ನೌಶಾದ್ ವಾಲ್ಯಾನಿ ವಿರುದ್ಧ ದೂರು ದಾಖಲಾದ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮುಶ್ತಾಕ್ ಶಾ ವಿವರಿಸಿದ್ದಾರೆ.
ಬಂಧಿತ ವೈದ್ಯ ನೌಶಾದ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ವೈದ್ಯರ ಕೃತ್ಯದ ಬಗ್ಗೆ ಕಿಡಿಕಾರಿರುವ ಕೆಲವು ಧಾರ್ಮಿಕ ಪಕ್ಷಗಳು ಮತ್ತು ಮೌಲ್ವಿಗಳೂ ಕೂಡ ಪೊಲೀಸರಿಗೆ ದೂರು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಮ್‌ಗೆ ಅವಮಾನ ಮಾಡಿರುವ ಆರೋಪದ ಮೇಲೆ ಕಳೆದ ತಿಂಗಳು ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿ ಎಂಬಾಕೆಗೆ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿತ್ತು. ಇದು ದೇಶಾದ್ಯಂತ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.