ಇಸ್ಲಾಮಾಬಾದ್, ಸೋಮವಾರ, 13 ಡಿಸೆಂಬರ್ 2010( 17:47 IST )
ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಆರೋಪ ಎಸಗಿರುವ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸೋಮವಾರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಸ್ಥಳೀಯ ನಿವಾಸಿ ಶಷಾಜಹಾನ್ ಖಾನ್ ದುರ್ರಾನಿ ಅವರು ಮುಷರ್ರಫ್ ವಿರುದ್ಧ ಪಿಐಎಲ್ ದಾಖಲಿಸಿದ್ದಾರೆ. ಮುಷರ್ರಫ್ ಅವರು ಅಧಿಕಾರಾವಧಿ ಸಂದರ್ಭದಲ್ಲಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಲ್ಲದೇ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣದ ಹಿಂದೆಯೂ ಮುಷರ್ರಫ್ ಅವರ ಕೈವಾಡ ಇದೆ ಎಂಬ ಶಂಕೆ ಬಲವಾಗಿ ಕೇಳಿಬರುತ್ತಿದೆ. ಆ ನಿಟ್ಟಿನಲ್ಲಿ ಮುಷರ್ರಫ್ ವಿರುದ್ಧ ಕೋರ್ಟ್ ಕಾನೂನು ಕ್ರಮ ಕೈಗೊಳ್ಳಬೇಕೆಂದು ದುರ್ರಾನಿ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಎಲ್ಲಾ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಬ್ರಿಟನ್‌ನಲ್ಲಿರುವ ಮುಷರ್ರಫ್ ಅವರನ್ನು ಪಾಕಿಸ್ತಾನಕ್ಕೆ ಕರೆತರುವಂತೆ ಆದೇಶಿಸಬೇಕೆಂದು ತಿಳಿಸಿದ್ದಾರೆ.
ಅದೇ ರೀತಿ ಮಾಜಿ ಅಧ್ಯಕ್ಷ ಮುಷರ್ರಫ್ ಅವರಿಗೆ ತಪ್ಪು ಸಲಹೆ ನೀಡಿ ದಿಕ್ಕು ತಪ್ಪಿಸಿರುವ ವಕ್ತಾರ ಮೇಜರ್ ಜನರಲ್ ರಶೀದ್ ಖುರೇಷಿ ಹಾಗೂ ಮುಹಮ್ಮದ್ ಅಲಿ ಸೈಫ್ ಅವರ ವಿರುದ್ಧವೂ ನ್ಯಾಯಾಲಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.