ವಾಷಿಂಗ್ಟನ್, ಮಂಗಳವಾರ, 14 ಡಿಸೆಂಬರ್ 2010( 11:58 IST )
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಅಮೆರಿಕದ ವಿಶೇಷ ರಾಜತಾಂತ್ರಿಕ ರಿಚರ್ಡ್ ಹಾಲ್‌ಬ್ರೂಕ್ ಅವರು ಸೋಮವಾರ ನಿಧನರಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಿಚರ್ಡ್ ಅವರು ದೇಶದ ವಿವಿಧ ಹುದ್ದೆಗಳಲ್ಲಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೇ ಅಮೆರಿಕದ ವಿಶೇಷ ಪ್ರತಿನಿಧಿಯಾಗಿ ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸಿದ ಅವರು ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರು ಅಮೆರಿಕದ ಟ್ರಬಲ್‌ಶೂಟರ್ (ಕಠಿಣ ಪರಿಸ್ಥಿತಿಗಳನ್ನು ಇತ್ಯರ್ಥಪಡಿಸುವ) ಎಂದೇ ಹೆಸರಾಗಿದ್ದರು.
ಪರಸ್ಪರ ಹೊಂದಾಣಿಕೆ ಮತ್ತು ಅಭಿಪ್ರಾಯದ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂಬುದನ್ನು ಅವರು ಮನಗಂಡಿದ್ದರು. ಹಾಗಾಗಿ ಅವರ ನಿಧನ ತುಂಬಲಾರದ ನಷ್ಟ ಎಂದು ಒಬಾಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಿಚರ್ಡ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿರುವುದಾಗಿ ಶ್ವೇತಭವನದ ಮೂಲಗಳು ತಿಳಿಸಿವೆ.