ವಿಶ್ವದ ಅತೀ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬುರ್ಜ್ ಖಲೀಫಾದಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಲು ಇಚ್ಛಿಸುವವರಿಗೆ ಕಡಿಮೆ ದರದ ಬಾಡಿಗೆಯಲ್ಲಿ ರೂಂ ನೀಡಲು ಯುಎಇಯಲ್ಲಿರುವ ಆನ್‌ಲೈನ್ ಕಂಪನಿಯೊಂದು ಆಫರ್ ನೀಡಿದೆ.
ದಿನಕ್ಕೆ 285 (ಸುಮಾರು 14 ಸಾವಿರ ರೂ.) ಅಮೆರಿಕನ್ ಡಾಲರ್ ಬಾಡಿಗೆ ನೀಡಿದರೆ ಈ ಕಟ್ಟಡದಲ್ಲಿ ಐಷಾರಾಮಿ ಪೀಠೋಪಕರಣಗಳಿರುವ ಸುಸಜ್ಜಿತವಾದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ರಾತ್ರಿ ಕಳೆಯಬಹುದು ಎಂದು ದುಬೈ ಮೂಲದ ಕಂಪನಿ ತಿಳಿಸಿದೆ.
ಈ ಅಪಾರ್ಟ್‌ಮೆಂಟ್‌ನಲ್ಲಿ ಸಂಪೂರ್ಣ ನಿಸ್ತಂತು ಸಂದೇಶ ವಾಹಕ ಹಾಗೂ ಕಂಪ್ಯೂಟರ್ ವ್ಯವಸ್ಥೆ ಇರುತ್ತದೆ. ಅಲ್ಲಿ ನಾಲ್ವರಿಗೆ ಮಾತ್ರ ಅವಕಾಶವಿದೆ. ಮಲಗುವ ಕೋಣೆಯಲ್ಲಿ ಡಬಲ್ ಬೆಡ್ ಹಾಗೂ ಎರಡು ಸೋಫಾಗಳಿವೆ.
188 ಅಂತಸ್ತುಗಳಿರುವ ಈ ಕಟ್ಟಡದ 19ನೇ ಮಹಡಿಯಲ್ಲಿ ಈ ಫ್ಲ್ಯಾಟ್ ಇದೆ. ಬುರ್ಜ್ ಖಲೀಫಾದಲ್ಲಿ 900 ಸ್ಟುಡಿಯೋಗಳು, ನಾಲ್ಕು ಬೆಡ್‌ರೂಂನ ಅಪಾರ್ಟ್‌ಮೆಂಟ್‌ಗಳು ಇವೆ. ಅರಮಾನಿ ರೆಸಿಡೆನ್ಸ್‌ನ 144 ಸುಸಜ್ಜಿತವಾದ ಖಾಸಗಿ ಫ್ಲ್ಯಾಟ್‌ಗಳಿವೆ. ನಾಲ್ಕು ಈಜುಕೊಳ ಸೇರಿದಂತೆ ಹಲವಾರು ಸೌಕರ್ಯಗಳನ್ನು ಹೊಂದಿದೆ.