ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿರುವುದು ಎಲ್‌ಟಿಟಿಇಯ ದೊಡ್ಡ ಪ್ರಮಾದ ಎಂದು ತಮಿಳ್ ಟೈಗರ್ ಮಾಜಿ ಕಮಾಂಡರ್ ಕರುಣಾ ಅಮ್ಮಾನ್ ತಿಳಿಸಿದ್ದಾರೆ.
ಶ್ರೀಲಂಕಾ ಸರಕಾರದಲ್ಲಿ ಡೆಪ್ಯುಟಿ ಸಚಿವರಾಗಿರುವ ವಿನಾಯಕಮೂರ್ತಿ ಮುರಳೀಧರನ್ ಅಲಿಯಾಸ್ ಕರುಣಾ ಅಮ್ಮಾನ್, ಎಲ್‌ಟಿಟಿಇಯ ಜನಾಂಗೀಯ ಯುದ್ಧದ ಕುರಿತು ಆಯೋಗ ಪರಿಶೀಲಿಸುತ್ತಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಇಂತಹ ಸಂಘಟನೆ ಮತ್ತೆ ತಲೆಎತ್ತದಂತೆ ಹಾಗೂ ಯುದ್ಧದ ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಶ್ರೀಲಂಕಾ ಸರಕಾರ ಎಲ್ಎಲ್ಆರ್‌ಸಿ(ಲೆಸ್ಸೆನ್ ಲರ್ನ್ ಮತ್ತು ರಿಕನ್‌ಸಿಲಿಯೇಷನ್ ಕಮಿಷನ್) ಅನ್ನು ರಚಿಸಿದೆ ಎಂದು ಅಮ್ಮಾನ್ ವಿವರಿಸಿದ್ದಾರೆ. ಎಲ್‌ಟಿಟಿಇ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ನಂತರ ಭಾರತ ಸಂಘಟನೆ ಮೇಲೆ ನಿಷೇಧ ಹೇರಿತ್ತು.
ಏತನ್ಮಧ್ಯೆ 1983ರಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಮತ್ತು ಆ ಸಂದರ್ಭದಲ್ಲಿ ಶರಣಾದ ಸುಮಾರು 600 ಪೊಲೀಸರನ್ನು ಹತ್ಯೆಗೈದ ಪ್ರಕರಣಕ್ಕೆ ಅಂದು ಎಲ್‌ಟಿಟಿಇಯಲ್ಲಿದ್ದ ಕರುಣಾ ಕೂಡ ಹೊಣೆಗಾರರು ಎಂದು ಲಂಕಾ ಪೂರ್ವ ಪ್ರಾಂತ್ಯದ ಮುಖ್ಯಮಂತ್ರಿ ಸಿವಾನೆಸಾಥುರೈ ಚಂದ್ರಕಾಂತನ್ ಅಲಿಯಾಸ್ ಪಿಲಾಯಾನ್ ಅವರ ಆರೋಪವನ್ನು ಕರುಣಾ ಈ ಸಂದರ್ಭದಲ್ಲಿ ಅಲ್ಲಗಳೆದಿದ್ದಾರೆ.