ಇಸ್ಲಾಮಾಬಾದ್, ಮಂಗಳವಾರ, 14 ಡಿಸೆಂಬರ್ 2010( 19:05 IST )
ಪ್ರಸಕ್ತ ಸಾಲಿನಲ್ಲಿ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಗೆ ಪಾಕಿಸ್ತಾನಿಯರಿಗೆ ಕಲ್ಪಿಸಿಕೊಟ್ಟಿರುವ ವಸತಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಇಬ್ಬರು ಸಚಿವರನ್ನು ವಜಾಗೊಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಅವರು ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಸ್ವ ಪ್ರೇರಣೆಯಿಂದ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಯಾತ್ರಾರ್ಥಿಗಳಿಗೆ ಬಾಡಿಗೆ ವಸತಿ ಮಾಡಿಕೊಡುವಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪ ದೇಶಾದ್ಯಂತ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಸುಪ್ರೀಂಕೋರ್ಟ್ ತರಾಟೆಯ ನಂತರ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಜಾಮ್ ಸ್ವಾಟಿ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವ ಹಮೀದ್ ಸಯೀದ್ ಕಾಜ್ಮಿಯನ್ನು ವಜಾಗೊಳಿಸಿದ್ದಾರೆ. ಆದರೆ ಸಚಿವರನ್ನು ವಜಾಗೊಳಿಸಿರುವ ಬಗ್ಗೆ ಪಾಕ್ ಅಧಿಕಾರಿಗಳು ನೀಡಿರುವ ಪ್ರಕಟಣೆಯಲ್ಲಿ ಯಾವುದೇ ವಿವರಣೆ ನೀಡಿಲ್ಲ ಎಂದು ಪಿಟಿಐ ವರದಿ ತಿಳಿಸಿದೆ.