ಬಾಂಗ್ಲಾದೇಶದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಗಾಬರಿಗೊಂಡ ಕಾರ್ಮಿಕರು ಕಟ್ಟಡದಿಂದ ಕೆಳ ಹಾರಿದವರು ಸೇರಿದಂತೆ ಹಲವರು ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಉದ್ಯಮಿ ಹಾ ಮೀಮ್ ಅವರ ಸುಮಾರು ಹತ್ತು ಅಂತಸ್ತಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಘಟನೆಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಘಟನೆ ಬಗ್ಗೆ ತನಿಖೆಗೆ ಬಾಂಗ್ಲಾ ಸರಕಾರ ಆದೇಶಿಸಿದೆ.
ಘಟನಾ ಸ್ಥಳಕ್ಕೆ ಆಂತರಿಕ ಸಚಿವ ಶಾಹಾರಾ ಖಾಟುನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ತು ಅಂತಸ್ತಿನ ಕಟ್ಟಡದ ಮೇಲಿನ ಎರಡು ಅಂತಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಪತ್ರಕರ್ತ ಮೋನಿರ್ ಹೊಸೈನ್ ತಿಳಿಸಿದ್ದಾರೆ. ಸುಮಾರು 25 ಮೃತದೇಹಗಳನ್ನು ಅಂಬ್ಯುಲೆನ್ಸ್‌ಗೆ ತುಂಬಿಸುತ್ತಿರುವುದನ್ನು ಕಂಡಿರುವುದಾಗಿ ಮತ್ತೊಬ್ಬ ಪತ್ರಕರ್ತ ರಫೀಕ್ ಇಸ್ಲಾಮ್ ವಿವರಿಸಿದ್ದಾರೆ.
ಬೆಂಕಿ ಅನಾಹುತದಲ್ಲಿ ಸುಮಾರು 27 ಮಂದಿ ಸಾವನ್ನಪ್ಪಿರುವುದಾಗಿ ಡಿಗಂತಾ ಟೆಲಿವಿಷನ್ ವರದಿ ಮಾಡಿದೆ. ಅದೇ ರೀತಿ ಎಟಿಎನ್ ನ್ಯೂಸ್ ಕೂಡ 27 ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿ ಮಾಡಿದೆ.