ಲೈಂಗಿಕ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 80 ನಿಮಿಷಗಳ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ (39) ಅವರಿಗೆ ಮಂಗಳವಾರ ಜಾಮೀನು ನೀಡಿದೆ. ಆದರೆ ಅಸಾಂಜ್ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಜೂಲಿಯಾನ್ ಅವರಿಗೆ ಕೋರ್ಟ್ ಜಾಮೀನು ನೀಡಿದ್ದರೂ ಕೂಡ ಈ ಸಂದರ್ಭದಲ್ಲಿ ಸ್ವೀಡನ್ ಪ್ರಾಸಿಕ್ಯೂಟರ್, ಅಸಾಂಜ್ ಅವರು ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ಅನ್ನು ಧರಿಸಿಲ್ಲ. ಹಾಗಾಗಿ ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಆ ನಿಟ್ಟಿನಲ್ಲಿ ಪ್ರಾಸಿಕ್ಯೂಟರ್ ಮನವಿ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಸಾಂಜ್ ವಕೀಲರು ತಿಳಿಸಿದ್ದಾರೆ. ಅದಕ್ಕಾಗಿ ಮುಂದಿನ ವಿಚಾರಣೆಯ ನಿರೀಕ್ಷೆಯಲ್ಲಿರುವುದಾಗಿ ವಿವರಿಸಿದ್ದಾರೆ.
ಅಸಾಂಜ್ ಅವರು ಕಡು ನೀಲಿ ಬಣ್ಣದ ಜಾಕೆಟ್ ಮತ್ತು ಅದರ ಮೇಲೆ ಬಿಳಿ ಶರ್ಟ್ ಧರಿಸಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಅಸಾಂಜ್ ಅವರಿಗೆ ನ್ಯಾಯಾಲಯ ಗಡಿಪಾರು ಕಾಯ್ದೆಯನ್ವಯ ಜಾಮೀನು ನೀಡಬೇಕೆಂದು ವಕೀಲರು ಮನವಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 200,000 ಡಾಲರ್ ಶೂರಿಟಿ ಮೇಲೆ ಜಾಮೀನು ನೀಡಿರುವುದಾಗಿ ತಿಳಿಸಿತ್ತು. ಆದರೆ ಮುಂದಿನ ವಿಚಾರಣೆವರೆಗೆ ಜೈಲಿನಿಂದ ಬಿಡುಗಡೆ ಇಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.