ಇಸ್ಲಾಮಾಬಾದ್, ಗುರುವಾರ, 16 ಡಿಸೆಂಬರ್ 2010( 12:25 IST )
PTI
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಡಬ್ಬಲ್ ಗೇಮ್ ಆಡುತ್ತಿರುವ ಅಂಶ ಮತ್ತೊಮ್ಮೆ ಬಟಾಬಯಲಾಗಿದೆ. 26/11 ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾದ (ಜೆಯುಡಿ) ವರಿಷ್ಠ ಹಫೀಜ್ ಸಯೀದ್ ಬುಧವಾರ ಇಸ್ಲಾಮಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾನೆ. ಆದರೆ ಪಾಕ್ ಆತನನ್ನು ಸೆರೆ ಹಿಡಿಯದೆ ಕಣ್ಮುಚ್ಚಿ ಕುಳಿತಿದೆ.
ಪಾಕಿಸ್ತಾನದ ವಿವಾದಿತ ಧರ್ಮನಿಂದನೆ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ವಿರೋಧಿಸಿ ಪ್ರಮುಖ ಧಾರ್ಮಿಕ ಪಕ್ಷ ಮತ್ತು ಧಾರ್ಮಿಕ ಮುಖಂಡರು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಹಫೀಜ್ ಸಯೀದ್ ಪ್ರತ್ಯಕ್ಷನಾಗಿದ್ದ.
2008ರ ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿ ಜಮಾತ್ ಉದ್ ದಾವಾದ ಹಫೀಜ್ ಸಯೀದ್ ಮಾಸ್ಟರ್ ಮೈಂಡ್ ಎಂದು ಭಾರತ ಆರೋಪಿಸಿತ್ತು. ತದನಂತರ ಗೃಹಬಂಧನದಲ್ಲಿದ್ದ ಆತನನ್ನು ಕಳೆದ ವರ್ಷ ಬಂಧಮುಕ್ತಗೊಳಿಸಲಾಗಿತ್ತು. ಬಳಿಕ ಸಯೀದ್ ಪಂಜಾಬ್ ಪ್ರಾಂತ್ಯದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ, ಆದರೆ ಇಸ್ಲಾಮಾಬಾದ್‌ಗೆ ಕಾಲಿಟ್ಟಿರಲಿಲ್ಲವಾಗಿತ್ತು.
ಬುಧವಾರ ಇಸ್ಲಾಮಾಬಾದ್‌ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಹಫೀಜ್, ದೇಶದ ಧರ್ಮನಿಂದನಾ ಕಾಯ್ದೆಯ ಪರವಾಗಿ ಮಾಧ್ಯಮದ ಮೂಲಕ ವ್ಯವಸ್ಥಿತವಾಗಿ ಬೆಂಬಲ ನೀಡಬೇಕಾದ ಕೆಲಸ ಆಗಬೇಕಾಗಿದೆ ಎಂದು ಸಲಹೆ ನೀಡಿದ್ದ. ಈ ಸಂದರ್ಭದಲ್ಲಿ ಪಿಎಂಎಲ್-ಕ್ಯೂನ ಹಿರಿಯ ಮುಖಂಡ ಚೌಧುರಿ ಶುಜಾಟ್ ಹುಸೈನ್ ಕೂಡ ಹಾಜರಿದ್ದರು. ಅಲ್ಲದೇ ಧಾರ್ಮಿಕ ನಿಂದನಾ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಡಿಸೆಂಬರ್ 31ರಂದು ದೇಶಾದ್ಯಂತ ಬಂದ್ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಸಯೀದ್ ಕರೆ ನೀಡಿದ್ದಾನೆ.