ನ್ಯೂಯಾರ್ಕ್, ಗುರುವಾರ, 16 ಡಿಸೆಂಬರ್ 2010( 18:11 IST )
ನ್ಯೂಯಾರ್ಕ್ ನಗರದ ಜಾನ್.ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ಟ್ಯಾಂಕ್ ಅನ್ನು ಸ್ಫೋಟಿಸಲು ಸಂಚು ರೂಪಿಸಿದ ಆರೋಪದಡಿಯಲ್ಲಿ ಗುಯಾನಾದ ಮಾಜಿ ಸಂಸದನಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಕಾದಿರ್‌ಗೆ ಬ್ಲೂಕ್ಲೈನ್ ಫೆಡರಲ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಕಾದಿರ್ ಮತ್ತು ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಹ್ಯಾಂಡ್ಲರ್ ರುಸ್ಸೆಲ್ ಡೆಫ್ರೈಟಾಸ್ ವಿರುದ್ಧ ಸಂಚು ನಡೆಸಿರುವ ಆರೋಪದ ಮೇಲೆ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.
ಭಯೋತ್ಪಾದನಾ ಸಂಚು ಮತ್ತು ಈ ಬಗ್ಗೆ ಮಾತುಕತೆ ನಡೆಸಿರುವುದನ್ನು ಖಚಿತಪಡಿಸಿಕೊಂಡ ಎಫ್‌ಬಿಐ ಅಧಿಕಾರಿಗಳು 2007ರಲ್ಲಿ ಕಾದಿರ್‌ನನ್ನು ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ ಕಾದಿರ್ ಗುಯಾನಾದಲ್ಲಿ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಕಾರ್ಯಾಚರಣೆ ನಡೆಸಲು ಅನುಕೂಲ ಕಲ್ಪಿಸಿಕೊಟ್ಟಿರುವುದಾಗಿಯೂ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಆದರೆ ಕೋರ್ಟ್ ವಿಚಾರಣೆ ವೇಳೆ ಕಾದಿರ್, ತಾನು ಶಾಂತಿಯನ್ನು ಪ್ರೀತಿಸುವ ವ್ಯಕ್ತಿ. ಆ ನಿಟ್ಟಿನಲ್ಲಿ ನಾನು ಯಾವತ್ತೂ ಅಮೆರಿಕದ ಪ್ರಜೆಗಳಿಗೆ ತೊಂದರೆ ಕೊಡಬೇಕೆಂಬ ದುರುದ್ದೇಶ ಇಟ್ಟುಕೊಂಡಿಲ್ಲ ಎಂದು ಹೇಳಿದ್ದರು. ನಂತರ ಪ್ರಕರಣದ ವಾದ ಆಲಿಸಿದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ರುಸ್ಸೆಲ್‌ಗೆ ಜನವರಿ 21ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.