ಇಸ್ಲಾಮಾಬಾದ್, ಶುಕ್ರವಾರ, 17 ಡಿಸೆಂಬರ್ 2010( 17:32 IST )
ಪಾಕಿಸ್ತಾನ ಮಿಲಿಟರಿ 1971ರಲ್ಲಿ ನಡೆಸಿದ ಯುದ್ಧಕ್ಕೆ ಕ್ಷಮಾಪಣೆ ಕೇಳಬೇಕೆಂಬ ಬಾಂಗ್ಲಾದೇಶದ ಬೇಡಿಕೆಯನ್ನು ಪಾಕಿಸ್ತಾನ ಸಾರಸಗಟಾಗಿ ತಳ್ಳಿಹಾಕಿದೆ. ಪ್ರಸ್ತುತ ಸಂದರ್ಭದಲ್ಲಿ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಯ ಮೂಲಕ ಮುಂದುವರಿಯಬೇಕೆ ವಿನಃ ಈ ಹಿಂದಿನ ಘಟನೆಗಳಲ್ಲಿ ಮನಸ್ತಾಪ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದೆ.
ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್ ಮಿಜಾರುಲ್ ಖ್ವಾಯೆಸ್ ಅವರು ಕಳೆದ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕ್ ಅಧಿಕಾರಿಗಳ ಜತೆ ಮಾತನಾಡುತ್ತ ಈ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಮಾಧ್ಯಮವೊಂದರ ವರದಿ ಹೇಳಿದೆ.
1971ರ ಸಮರದಲ್ಲಿ ಪಾಕಿಸ್ತಾನ ಮಿಲಿಟರಿಯ ಕಾರ್ಯಾಚರಣೆ ತಪ್ಪು ಹೆಜ್ಜೆಯದ್ದಾಗಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ಕ್ಷಮೆ ಕೇಳುವ ಮೂಲಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ಹೆಚ್ಚಿನ ಸಹಾಯವಾಗಲಿದೆ ಎಂಬುದಾಗಿ ಖ್ಯಾಯೆಸ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಪಾಕಿಸ್ತಾನ ಬಾಂಗ್ಲಾದೇಶದ ಬೇಡಿಕೆಯನ್ನು ತಳ್ಳಿಹಾಕಿದ್ದು, ಉಭಯ ದೇಶಗಳು ಹೊಂದಾಣಿಕೆಯ ಮೂಲಕ ಮುಂದುವರಿಯುವುದೇ ಉತ್ತಮ ಎಂದು ತಿಳಿಸಿದೆ.