ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆದೇಶ ನೀಡಿರುವುದನ್ನು ವಿರೋಧಿಸಿ ಉಕ್ರೈನ್ ಸಂಸತ್‌ನಲ್ಲಿ ವಿರೋಧ ಪಕ್ಷದ ಸಂಸದರು ಮತ್ತು ಆಡಳಿತಾರೂಢ ಪಕ್ಷದ ಸಂಸದರು ನಡುವೆ ಮಾರಾಮಾರಿ ಹೊಡೆದಾಡಿಕೊಂಡು ಕೆಲವು ಸಂಸದರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮಾಜಿ ಪ್ರಧಾನಿ ಯೂಲಿಯಾ ಟೈಮೋಶೆನ್‌ಕೋ ವಿರುದ್ಧ ಭ್ರಷ್ಟಾಚಾರ ತನಿಖೆಗೆ ಆದೇಶ ನೀಡಿರುವುದನ್ನು ವಿರೋಧಿಸಿ ಸಂಸತ್ ಬಾವಿ ಸಮೀಪ ಧಾವಿಸಿದ ಸಂಸದರು ಕುರ್ಚಿ, ಮೈಕ್‌ಗಳನ್ನು ಕಿತ್ತೆಸೆದು ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ವಿಕ್ಟರ್ ಯಾನೂಕೋವೈಚಸ್ ನೇತೃತ್ವದ ಆಡಳಿತಾರೂಢ ರಿಜನ್ಸ್ ಲೇಟ್ ಪಕ್ಷದ ಸಂಸದರು ಪ್ರತಿ ದಾಳಿ ನಡೆಸಿದ್ದರು.
ಸಂಸದರು ಅವಾಚ್ಯ ಶಬ್ದಗಳನ್ನು ಬಳಸಿ ಕೂಗಾಡಿ, ಹೊಡೆದಾಡಿಕೊಂಡ ದೃಶ್ಯವನ್ನು ಮಾಧ್ಯಮಗಳು ನೇರವಾಗಿ ಪ್ರಸಾರ ಮಾಡಿವೆ. ಇದು ದೇಶದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿದೆ ಎಂದು ಬಣ್ಣಿಸಿವೆ.
ಸಂಸತ್‌ನಲ್ಲಿ ಸಂಸದರ ಮಾರಾಮಾರಿಯಲ್ಲಿ ಟೈಮೋಶೆನ್‌ಕೋ ಅಲ್ ಉಕ್ರೈನ್ ಫಾದರ್‌ಲ್ಯಾಂಡ್ ಪಕ್ಷದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯೂಲಿಯಾ ಟೈಮೋಶೆನ್‌ಕೋ ಅವರು 1996ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ, ಎರಡು ಬಾರಿ ಪ್ರಧಾನಿಯಾಗಿದ್ದರು. 1999-2001ರಲ್ಲಿ ಉಪ ಪ್ರಧಾನಿಯಾಗಿದ್ದ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದರು ಎಂಬ ಆರೋಪ ಇತ್ತು. ಆ ನಿಟ್ಟಿನಲ್ಲಿ ಉಕ್ರೈನ್ ಸಂಸತ್ ಯೂಲಿಯಾ ವಿರುದ್ಧ ಭ್ರಷ್ಟಾಚಾರದ ತನಿಖೆಗೆ ಆದೇಶ ನೀಡುವ ನಿರ್ಣಯವನ್ನು ಸಂಸತ್‌ನಲ್ಲಿ ಕೈಗೊಳ್ಳಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಆಕೆಯ ಪಕ್ಷದ ಸಂಸದರು ಗೂಂಡಾಗಿರಿಗೆ ಮುಂದಾಗಿದ್ದರು.