ವಿಶ್ವಸಂಸ್ಥೆ ಕಾಯಂ ಸ್ಥಾನದ ನಿರೀಕ್ಷೆಯಲ್ಲಿಲ್ಲ: ಪಾಕಿಸ್ತಾನ
ಇಸ್ಲಾಮಾಬಾದ್, ಸೋಮವಾರ, 20 ಡಿಸೆಂಬರ್ 2010( 17:21 IST )
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನದ ಬಗ್ಗೆ ಪಾಕಿಸ್ತಾನ ಎದುರು ನೋಡುತ್ತಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ತಿಳಿಸಿದ್ದಾರೆ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಖುರೇಷಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿನ ಕಾಯಂ ಸ್ಥಾನದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿಲ್ಲ ಎಂದು ತಿಳಿಸಿರುವುದಾಗಿ ಡೈಲಿ ಟೈಮ್ಸ್ ವರದಿ ಮಾಡಿದೆ.
ಯುಎನ್‌ಎಸ್‌ಸಿ ಯುನೈಟೆಡ್ ನೇಷನ್ಸ್‌ನ ಪ್ರಮುಖ ಅಂಗವಾಗಿದೆ, ಅಲ್ಲದೇ ಇದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಪ್ರಮುಖವಾಗಿ ಕಾಯ್ದುಕೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.
ಭದ್ರತಾ ಮಂಡಳಿಯಲ್ಲಿ 15 ಸದಸ್ಯ ರಾಷ್ಟ್ರಗಳಿದ್ದು, ಅದರಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಅಮೆರಿಕ ಕಾಯಂ ಸ್ಥಾನ ಪಡೆದಿರುವ ರಾಷ್ಟ್ರಗಳಾಗಿವೆ. ಅಲ್ಲದೇ ಎರಡು ವರ್ಷಗಳ ಅವಧಿಯ ಸುಮಾರು ಹತ್ತು ಕಾಯಂಯೇತರ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ.