ಅಕ್ರಮ ಸಂಬಂಧ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳಿಗೆ ಸಾರ್ವಜನಿಕವಾಗಿ ಚಾಟಿಯೇಟು ನೀಡಿದ್ದು, ಆಕೆ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಮ್ ಮೌಲ್ವಿಯನ್ನು ಸೆರೆ ಹಿಡಿದಿರುವುದಾಗಿ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತನ್ನ ಮಲ ಮಗನ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದ ಸೂಫಿಯಾ ಬೇಗಮ್(50)ಗೆ ರಾಜ್‌ಸಾಹಿ ಜಿಲ್ಲೆಯ ಇಸ್ಲಾಮಿಕ್ ಕೋರ್ಟ್ ಛಡಿಯೇಟಿನ ಶಿಕ್ಷೆ ವಿಧಿಸಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಎಎಫ್‌ಪಿಗೆ ವಿವರಿಸಿದ್ದಾರೆ.
ಆ ನಿಟ್ಟಿನಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಗ್ರಾಮದ ಹಿರಿಯರು ಸುಮಾರು 40 ಚಾಟಿ ಏಟು ಕೊಟ್ಟಿರುವುದಾಗಿ ಸ್ಥಳೀಯ ಮಾಧ್ಯಮವೊಂದರ ವರದಿ ತಿಳಿಸಿದೆ. ಅಲ್ಲದೇ ಆಕೆಗೆ ಚಾಟಿ ಏಟು ಕೊಟ್ಟ ಗ್ರಾಮದ ಹಿರಿಯರನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಜಿಜುಲ್ ಹಕ್ ತಿಳಿಸಿದ್ದಾರೆ.
ಚಾಟಿ ಏಟಿನ ಹೊಡೆತಕ್ಕೆ ಫಾತಿಮಾ ಗಂಭೀರವಾಗಿ ಅಸ್ವಸ್ಥಗೊಂಡು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ಆಕೆ ಸಾವನ್ನಪ್ಪಿರುವುದಾಗಿ ಹಕ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಮುಸ್ಲಿಮ್ ಪ್ರಾಬಲ್ಯ ಹೊಂದಿರುವ ಗ್ರಾಮಗಳಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಸಾರ್ವಜನಿಕವಾಗಿ ಚಾಟಿ ಏಟು ನೀಡುವುದು ಸಾಮಾನ್ಯ ಘಟನೆಯಾಗಿದೆ. ಆದರೆ ಇಂತಹ ಧಾರ್ಮಿಕ ಶಿಕ್ಷೆಯನ್ನು ಹೈಕೋರ್ಟ್ ನಿಷೇಧ ಹೇರಿತ್ತು.