ಯುವತಿಯೊಬ್ಬಳನ್ನು ಕಾರಿನಿಂದ ಹೊರಗೆಳೆದು ನಾಲ್ಕೈದು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಕರಾಚಿ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕುರಿತು ಸಿಂಧ್ ಪ್ರಾಂತ್ಯದ ಗವರ್ನರ್ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಾಮೂಹಿಕ ಅತ್ಯಾಚಾರ ಘಟನೆ ಕುರಿತು ಸಿಟಿಜೆನ್ಸ್ ಲಿಯಾಸನ್ ಪೊಲೀಸ್ ಸೆಲ್ ಸ್ವತಂತ್ರ ತನಿಖೆ ಕೈಗೆತ್ತಿಕೊಳ್ಳುವಂತೆ ರಾಜ್ಯಪಾಲ ಇಸ್ರಾತ್ ಉಲ್ ಇಬಾದ್ ಆದೇಶ ನೀಡಿದ್ದಾರೆ. ಘಟನೆ ಬಗ್ಗೆ ಜಿಯೋ ನ್ಯೂಸ್ ಸುದ್ದಿ ಪ್ರಸಾರ ಮಾಡಿದ ನಂತರ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.
ಸೀವೀವ್ ಬೀಚ್ ಪ್ರದೇಶದಿಂದ ಕಾರಿನಲ್ಲಿ ಹೊರಟ ಯುವತಿ ಬೆನ್ನಟ್ಟಿದ್ದ ಗುಂಪೊಂದು ಕ್ಲಿಫ್‌ಟನ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಆಕೆಯ ಕಾರನ್ನು ಮತ್ತೊಂದು ಕಾರಿನಲ್ಲಿ ಆಗಮಿಸಿದ್ದ ಕಾಮುಕರು ಡಿಕ್ಕಿ ಹೊಡೆಸಿದ್ದರು. ಆಗ ಕಾರಿನಿಂದ ಹೊರಬಿದ್ದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಯುವತಿಯಿಂದ ಸೋಮವಾರ ಮಾಹಿತಿ ಪಡೆಯಲಾಗಿದೆ. ಮೆಡಿಕಲ್ ರಿಪೋರ್ಟ್ ಕೂಡ ಬಂದಿದೆ. ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ತಾರಿಕ್ ಧಾರೆಜೆಯೋ ತಿಳಿಸಿದ್ದಾರೆ.