ಹಾಲಿವುಡ್ ಖ್ಯಾತ ಇರಾನಿಯನ್ ಚಿತ್ರ ನಿರ್ಮಾಪಕ ಜಾಫರ್ ಪಾನಾಹಿಗೆ ಇರಾನ್ ಕೋರ್ಟ್ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ ಮುಂದಿನ 20 ವರ್ಷಗಳ ತನಕ ಸಿನಿಮಾ ನಿರ್ದೇಶಿಸುವುದಾಗಿ, ನಿರ್ಮಿಸುವುದಾಗಲಿ ಮಾಡಬಾರದೆಂದು ನಿರ್ಬಂಧ ಹೇರಿರುವುದಾಗಿ ವಕೀಲರು ತಿಳಿಸಿದ್ದಾರೆ.
ಪಾನಾಹಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಖ್ಯಾತ ಸಿನಿಮಾ ನಿರ್ದೇಶಕ. ಅವರ ದಿ ಸರ್ಕಲ್, ವೈಟ್ ಬಾಲ್ಲೂನ್, ದಿ ಮಿರರ್ ಸಿನಿಮಾಗಳು ಇರಾನ್‌ನ ಮಾನವೀಯ ನೆಲೆಯ ಹೋರಾಟದ ಪ್ರತೀಕವಾಗಿ ಮೂಡಿಬಂದಿದ್ದವು. ಅಲ್ಲದೇ ಪಾನಾಹಿ ಇರಾನ್ ವಿರೋಧ ಪಕ್ಷಗಳ ಚಳವಳಿಯನ್ನೇ ಬೆಂಬಲಿಸುತ್ತಿದ್ದರು. ಇದು ಇರಾನ್ ಸರಕಾರಕ್ಕೆ ಆಕ್ರೋಶ ತರಲು ಪ್ರಮುಖ ಕಾರಣವಾಗಿದೆ.
ಆ ನಿಟ್ಟಿನಲ್ಲಿ ಪಾನಾಹಿ ಅವರನ್ನು ಒಳಸಂಚು ಮತ್ತು ಆಡಳಿತಾರೂಢ ಸರಕಾರದ ವಿರುದ್ಧ ದೌಲತ್ತು ನಡೆಸಿರುವ ಹಿನ್ನೆಲೆಯಲ್ಲಿ ದೋಷಿ ಎಂದು ಸಾಬೀತಾಗಿತ್ತು ಎಂಬುದಾಗಿ ಅವರ ವಕೀಲೆ ಫಾರಿದಾ ಗೆಯ್‌ರಾಟ್ ಇರಾನಿಯನ್ ಸ್ಟೇಟ್ ನ್ಯೂಸ್ ಏಜೆನ್ಸಿಗೆ ತಿಳಿಸಿರುವುದಾಗಿ ಗಾರ್ಡಿಯನ್ ವರದಿ ಮಾಡಿದೆ.
ಇದೀಗ ಪಾನಾಹಿ ಅವರಿಗೆ ಆರು ವರ್ಷಗಳ ಜೈಲುಶಿಕ್ಷೆ, ಜೊತೆಗೆ ಮುಂದಿನ 20 ವರ್ಷಗಳ ಕಾಲ ಸಿನಿಮಾ ನಿರ್ದೇಶಿಸುವುದಾಗಲಿ, ಸ್ಕ್ರಿಪ್ಟ್ ಬರೆಯುವುದಾಗಲಿ, ವಿದೇಶ ಪ್ರಯಾಣ, ದೇಶೀಯ ಹಾಗೂ ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ವಕೀಲರು ವಿವರಿಸಿದ್ದಾರೆ.