ನಾಲ್ವರು ಹೆಂಡತಿಯರನ್ನು ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಪತ್ನಿಯರೇ ಸೇರಿಕೊಂಡು ಗಂಡನನ್ನು ಹತ್ಯೆಗೈದಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಒಟ್ಟಾರೆ ಅವನ ಗ್ರಹಚಾರ ಕೆಟ್ಟಿತ್ತು. 46ರ ಹರೆಯದ ಯೂನೂಸ್ ಬೆಪಾರಿ ಆಟೋರಿಕ್ಷಾ ಚಾಲಕ. ಆತ ತನ್ನ ಇಬ್ಬರು ಹೆಂಡತಿಯರ ಜತೆ ಸೋಮವಾರ ತನ್ನ ಹಳ್ಳಿಗೆ ತೆರಳಿದ್ದ. ಈ ಸಂದರ್ಭದಲ್ಲಿಯೇ ಆತನ ಮೂರನೇ ಪತ್ನಿ ಮುಖಾಮುಖಿಯಾಗಿದ್ದಳು. ಆಗ ಮೂವರ ನಡುವೆ ಜಗಳ ನಡೆದು, ಯೂನೂಸ್ ಕಳ್ಳಾಟ ಬಯಲಾಗಿತ್ತು. ಆತನಿಗೆ ನಾಲ್ವರು ಹೆಂಡತಿಯರು ಇರುವುದು ಬಹಿರಂಗವಾಗಿತ್ತು.
ಮೂವರು ಪತ್ನಿಯರು ಗಂಡ ಯೂನೂಸ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆತನ ನಾಲ್ಕನೆ ಹೆಂಡತಿ ಮತ್ತೊಂದು ಗ್ರಾಮದಲ್ಲಿ ವಾಸವಾಗಿದ್ದಳು. ಗಂಡನ ಜತೆ ವಾದಕ್ಕಿಳಿದ ಪತ್ನಿಯರು ಆತನನ್ನು ಕರೆದುಕೊಂಡು ನಾಲ್ಕನೆ ಹೆಂಡತಿ ವಾಸವಿದ್ದ ಕಾಬಿರ್ಪುರಕ್ಕೆ ಕರೆತಂದಿದ್ದರು. ಅಲ್ಲಿ ನಾಲ್ವರು ಸೇರಿ ಯೂನೂಸ್ಗೆ ಮನಬಂದಂತೆ ಥಳಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ನ್ಯೂ ಏಜ್ ವರದಿ ತಿಳಿಸಿದೆ.
ಹೆಂಡತಿಯರ ಹೊಡೆತದಿಂದ ಯೂನೂಸ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಫಾರಿದ್ಪುರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೂನೂಸ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.