ಇಸ್ಲಾಮಾಬಾದ್, ಬುಧವಾರ, 22 ಡಿಸೆಂಬರ್ 2010( 19:42 IST )
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬುಧವಾರ ಪಾಕಿಸ್ತಾನದ ಪೊಲೀಸರು ಸೆರೆ ಹಿಡಿದಿರುವುದಾಗಿ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಭುಟ್ಟೋ ರಾಲಿ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ನೀಡದ ಆರೋಪದಡಿಯಲ್ಲಿ ರಾವಲ್ಪಿಂಡಿಯ ಪೊಲೀಸ್ ಅಧಿಕಾರಿಗಳನ್ನು ಇದೀಗ ಬಂಧಿಸಲಾಗಿದೆ. 2007 ಡಿಸೆಂಬರ್ 27ರಂದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿಯಲ್ಲಿ ಭುಟ್ಟೋ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗನ್ ಮತ್ತು ಆತ್ಮಹತ್ಯಾ ದಾಳಿ ನಡೆಸಿ ಹತ್ಯೆಗೈದಿದ್ದರು.
ಅಲ್ಲದೇ ಬೆನಜೀರ್ ಭುಟ್ಟೋ ಅವರಿಗೆ ಅಂದಿನ ಸರಕಾರ ಸಮರ್ಪಕವಾದ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಶ್ವಸಂಸ್ಥೆಯ ತನಿಖಾ ಆಯೋಗ ಗಂಭೀರವಾಗಿ ಆರೋಪಿಸಿತ್ತು. ಆದರೂ ಭುಟ್ಟೋ ಸಾವನ್ನಪ್ಪಿ ಮೂರು ವರ್ಷ ಕಳೆದರೂ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾ ಆಯೋಗ ಇನ್ನೂ ಕೂಡ ಕಸರತ್ತು ನಡೆಸುತ್ತಿದೆ.
ಭುಟ್ಟೋ ಹತ್ಯೆ ಸಂದರ್ಭದಲ್ಲಿ ಸೂಕ್ತ ರಕ್ಷಣೆ ನೀಡುವಲ್ಲಿ ನಗರ ಪೊಲೀಸ್ ಅಧಿಕಾರಿಯಾಗಿದ್ದ ಸೌದ್ ಅಜೀಜ್ ಹಾಗೂ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಖುರ್ರಮ್ ಶಾಜಾದ್ ವಿಫಲರಾಗಿರುವ ಆರೋಪದ ಮೇಲೆ ಅವರ ವಿರುದ್ಧ ಕಳೆದ ತಿಂಗಳು ರಾವಲ್ಪಿಂಡಿ ಕೋರ್ಟ್ ಬಂಧನದ ವಾರಂಟ್ ಹೊರಡಿಸಿತ್ತು.
ಕೋರ್ಟ್ ಆದೇಶದ ಮೇರೆಗೆ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ಇಂದು ಸೆರೆಹಿಡಿಯಲಾಗಿದೆ. ಏತನ್ಮಧ್ಯೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತಾದರೂ ಜಾಮೀನು ನೀಡಲು ನಿರಾಕರಿಸಿದೆ.