ಇಸ್ಲಾಮಾಬಾದ್, ಬುಧವಾರ, 22 ಡಿಸೆಂಬರ್ 2010( 19:44 IST )
ನ್ಯಾಯಾಲಯದೊಳಗೆ ಮಗ ತನ್ನ ತಾಯಿಯನ್ನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಆತ ತಾನು ಗೌರವ ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ವಿವರಿಸಿದ್ದಾರೆ.
ಮೊಹಮ್ಮದ್ ರಫೀಕ್ ಎಂಬಾತ ತನ್ನ ತಾಯಿ ಗುಲಾಮ್ ಬೀಬಿಯನ್ನು ಕೋರ್ಟ್‌ನಲ್ಲಿ ನ್ಯಾಯಾಧೀಶ ಇಸೆದ್ ರಾಸಾ ಅರಿಫ್‌ವಾಲಾ ಅವರ ಎದುರಲ್ಲೇ ಗುಂಡಿಟ್ಟು ಕೊಂದಿದ್ದಾನೆ.
ತನ್ನ ತಾಯಿ ಗುಲಾಮ್ ಬೀಬಿ ಹಾಗೂ ತಂಗಿ ಅಬಿದಾ ಬೀಬಿ ಶಾಬಾಜ್ ಅಹ್ಮದ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿರುವುದಾಗಿ ರಫೀಕ್ ಶಂಕಿಸಿದ್ದ. ನಂತರ ರಫೀಕ್ ಹಾಗೂ ತಂದೆ ನಾಜಿರ್ ಅಹ್ಮದ್ ಅವರ ವಿರೋಧದ ನಡುವೆಯೇ ಅಬಿದಾ ಬೀಬಿ ಶಾಬಾಜ್ ಅಹ್ಮದ್ ಜತೆ ವಿವಾಹವಾಗಿದ್ದಳು. ಆದರೆ ಇದರಿಂದ ಆಕ್ರೋಶಗೊಂಡ ತಂದೆ ಮತ್ತು ಮಗ ಆಕೆಯನ್ನು ಆತನ ಮನೆಯಿಂದ ಬಲವಂತದಿಂದ ಕರೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿ ಅಬಿದಾಳನ್ನು ವಾಪಸ್ ಕರೆತರಲು ನೆರವು ನೀಡಬೇಕೆಂದು ಕೋರಿ ಶಾಬಾಜ್ ಅಹ್ಮದ್ ಕೋರ್ಟ್ ಮೊರೆ ಹೋಗಿದ್ದ.
ಮಂಗಳವಾರ ಗುಲಾಮ್ ಬೀಬಿ ಮತ್ತು ಅಬಿದಾ ಇಬ್ಬರು ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲಿಯೇ ಕೋರ್ಟ್‌ನೊಳಕ್ಕೆ ನುಗ್ಗಿದ ರಫೀಕ್ ತನ್ನ ತಾಯಿಯನ್ನು ಗುಂಡಿಟ್ಟು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಆತನನ್ನು ಕೋರ್ಟ್ ಅಧಿಕಾರಿಗಳು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.