ವಿಶ್ವದ 'ದೊಡ್ಡಣ್ಣ'ನ ಮಹತ್ವದ ರಹಸ್ಯ ದಾಖಲೆಗಳನ್ನು ತನ್ನ ವಿಕಿಲೀಕ್ಸ್ ವೆಬ್‌ಸೈಟ್ ಮೂಲಕ ಜಗಜ್ಜಾಹೀರು ಮಾಡುವ ಮೂಲಕ ಜಗತ್ತಿನ ಹಲವು ರಾಷ್ಟ್ರಗಳನ್ನು ಬೆಚ್ಚಿಬೀಳಿಸಿದ್ದ ಜೂಲಿಯಾನ್ ಅಸಾಂಜ್ ಅವರು ಫ್ರಾನ್ಸ್‌ನ ಲೇ ಮಂಡೇ ಪತ್ರಿಕೆಯ ಸಮೀಕ್ಷಾ ಸ್ಪರ್ಧೆಯಲ್ಲಿ 'ಮ್ಯಾನ್ ಆಫ್ ದಿ ಇಯರ್' ಆಗಿ ಹೊರಹೊಮ್ಮಿದ್ದಾರೆ.
ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಶೇ.56ರಷ್ಟು ಮಂದಿ ಜೂಲಿಯಾನ್ ಅಸಾಂಜ್ ಪರವಾಗಿ ಮತ ಚಲಾಯಿಸಿ ಮ್ಯಾನ್ ಆಫ್ ದಿ ಇಯರ್ ಆಗಿ ಆಯ್ಕೆ ಮಾಡಿ ಗೌರವ ಸೂಚಿಸಿದ್ದಾರೆ.
ಅದೇ ರೀತಿ ಚೀನಾದ ಪ್ರಜಾಪ್ರಭುತ್ವ ಪರ ಹೋರಾಟಗಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ಲಿಯೂ ಕ್ಸಿಯಾಬೋ ಅವರು ಶೇ.22ರಷ್ಟು ಹಾಗೂ ಅಮೆರಿಕನ್ ಫೇಸ್‌ಬುಕ್ ಅಧ್ಯಕ್ಷ ಮಾರ್ಕ್ ಝುಕೆರ್‌ಬರ್ಗ್ ಶೇ.6.9ರಷ್ಟು ಮತ ಪಡೆದಿದ್ದಾರೆ ಎಂದು ಪತ್ರಿಕೆ ವಿವರಿಸಿದೆ. ಮತ್ತೊಂದು ಪ್ರತಿಷ್ಠಿತ ಪತ್ರಿಕೆ ಟೈಮ್ ಮ್ಯಾಗಜಿನ್ ಫೇಸ್‌ಬುಕ್ ಅಧ್ಯಕ್ಷ ಮಾರ್ಕ್ ಝುಕೆರ್‌ಬರ್ಗ್ ಅವರನ್ನು ವರ್ಷದ ವ್ಯಕ್ತಿ ಎಂದು ಘೋಷಿಸಿತ್ತು.