ಇಸ್ಲಾಮಾಬಾದ್, ಶುಕ್ರವಾರ, 24 ಡಿಸೆಂಬರ್ 2010( 12:57 IST )
ಪಾಕಿಸ್ತಾನದ ನೆಲದಲ್ಲಿ ಅಮೆರಿಕವಾಗಲಿ ಅಥವಾ ಯಾವುದೇ ವಿದೇಶಿ ಪಡೆಗಳು ಕಾರ್ಯಾಚರಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿರುವ ಪಾಕ್, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ.
ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ರೆಡ್ ಲೈನ್ಸ್ ಮತ್ತು ಸಾಮರ್ಥ್ಯವನ್ನು ಅಮೆರಿಕ ಕೂಡ ಮನಗಂಡಿದೆ. ಹಾಗಾಗಿ ದೇಶದ ಭಯೋತ್ಪಾದನಾ ನಿಗ್ರಹ ಕುರಿತಂತೆ ಅಮೆರಿಕ ಗೊಂದಲ ಹುಟ್ಟು ಹಾಕುವುದನ್ನು ನಾವು ಬಯಸುವುದಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅಬ್ದುಲ್ ಬಾಸಿಟ್ ವೀಕ್ಲಿ ನ್ಯೂಸ್‌ಗೆ ವಿವರಿಸಿದ್ದಾರೆ.
ಉಗ್ರರನ್ನು ಮಟ್ಟ ಹಾಕಲು ನ್ಯಾಟೋ, ಅಂತಾರಾಷ್ಟ್ರೀಯ ಪಡೆಗಳ ಜತೆ ದೇಶದ ಭದ್ರತಾ ಪಡೆಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಆ ನೆಲೆಯಲ್ಲಿ ನಮ್ಮ ನೆಲದಲ್ಲಿ ವಿದೇಶಿ ಪಡೆಗಳು ಕಾರ್ಯಾಚರಿಸುವುದಕ್ಕೆ ನಾವು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ ನೇತೃತ್ವದ ಪಡೆ ತಮ್ಮ ಸಮರವನ್ನು ಪಾಕಿಸ್ತಾನಕ್ಕೂ ವಿಸ್ತರಿಸುವ ಯೋಜನೆಯ ಕುರಿತು ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.