ಅಮೆರಿಕಾದ ಅಗತ್ಯ ವಸ್ತುಗಳ ಮಳಿಗೆಯೊಂದರಲ್ಲಿ ಗುಮಾಸ್ತನಾಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕ್ರಿಸ್ಮಸ್ ದಿನ ಬೆಳಿಗ್ಗೆ ದರೋಡೆಕೋರರು ಗುಂಡಿಕ್ಕಿ ಕೊಂದು ಹಾಕಿದ್ದಾರೆ.
ಬಲಿಯಾದ ಯುವಕನನ್ನು 22ರ ಹರೆಯದ ಜಯಚಂದ್ರ ಇಲಾಪ್ರೊಲು ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದವನಾಗಿರುವ ಈತನ ಮೇಲೆ ದುಷ್ಕರ್ಮಿಗಳು ಐದು ಬಾರಿ ಗುಂಡು ಹಾರಿಸಿದ್ದರು.
ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾ ರಾಜ್ಯದ ಪಸಾದೆನಾ ಜಿಲ್ಲೆಯಲ್ಲಿ. ಕ್ರಿಸ್ಮಸ್ ದಿನ ಮುಂಜಾನೆ ಅಗತ್ಯ ವಸ್ತುಗಳ ಅಂಗಡಿಯಲ್ಲಿ ಕಾರ್ಯ ನಿರತನಾಗಿದ್ದ ಹೊತ್ತಿನಲ್ಲಿ ಕನಿಷ್ಠ ಇಬ್ಬರು ದರೋಡೆಕೋರರು ನುಗ್ಗಿದ್ದು, ವಿದ್ಯಾರ್ಥಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯಚಂದ್ರ ಭಾರತದವನು. ಕಳೆದ ಒಂದು ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಎಂದು ಈ ಮಳಿಗೆಯ ವ್ಯವಸ್ಥಾಪಕ ಆಲಿ ಖಾನ್ ಎಂಬವರು ತಿಳಿಸಿದ್ದಾರೆ. ಶಂಕಿತರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜಯಚಂದ್ರನಿಗೆ ಗುಂಡಿಕ್ಕುವ ಮೊದಲು ವ್ಯಕ್ತಿಯೊಬ್ಬ ಮುಖವಾಡ ಧರಿಸಿಕೊಂಡು ಗ್ಯಾಸ್ ಸ್ಟೇಷನ್ ಒಂದಕ್ಕೆ ಬಂದಿರುವ ಸಿಸಿಟಿವಿ ತುಣುಕು ಪೊಲೀಸರಿಗೆ ದೊರೆತಿದೆ. ಇದರ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ದರೋಡೆಕೋರ ಎದುರಿಗೆ ಬರುತ್ತಿದ್ದಂತೆ ಜಯಚಂದ್ರ ಬಾಗಿಲಿನ ಹಿಂಬದಿಗೆ ಹೋಗಿ ಅವಿತುಕೊಂಡರೂ, ನೇರವಾಗಿ ಬಾಗಿಲಿಗೆ ಗುಂಡಿಕ್ಕಲಾಗಿದೆ. ಬಾಗಿಲನ್ನು ಒಡೆದು ಗುಂಡು ಬಲಿಪಶುವಿನ ದೇಹಕ್ಕೆ ಪ್ರವೇಶಿಸಿದೆ ಎಂದು ಪೊಲೀಸರು ತಿಳಿಸಿದ್ದು, ಈ ಸಂಬಂಧ ಸಿಸಿಟಿವಿ ವೀಡಿಯೋ ತುಣುಕನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ದುಷ್ಕರ್ಮಿಗಳು ಇಬ್ಬರಿದ್ದರು. ಆದರೆ ದಾಳಿ ಮಾಡಿರುವುದು ಒಬ್ಬ ಮಾತ್ರ. ಮತ್ತೊಬ್ಬನಲ್ಲಿ ಶಸ್ತ್ರಾಸ್ತ್ರ ಇದ್ದಂತಿಲ್ಲ. ಆತ ಸಹಾಯಕನಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ನಡೆದ ಒಂದೆರಡು ನಿಮಿಷದ ನಂತರ ಮಹಿಳೆಯೊಬ್ಬಳು ಸ್ಟೋರಿಗೆ ಬಂದಾಗ ವಿಷಯ ಬೆಳಕಿಗೆ ಬಂದಿತ್ತು. ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು.