ಅಮೆರಿಕದ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸುವ ಮೂಲಕ ಜಾಗತಿಕವಾಗಿ ಸಂಚನಲ ಮೂಡಿಸಿದ್ದ ವಿಕಿಲೀಕ್ಸ್ ಸ್ಥಾಪಕ ಜೂಲಿಯಾನ್ ಅಸಾಂಜ್ ಇದೀಗ ತನ್ನ ಆತ್ಮಕಥೆ ಪ್ರಕಟಣೆ ಕುರಿತಂತೆ ಸುಮಾರು 1.5 ಮಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸ್ವೀಡನ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಎದುರಿಸುತ್ತಿರುವ ಅಸಾಂಜ್, ತನಗೆ ಆತ್ಮಕಥೆ ಪ್ರಕಟಣೆ ಕುರಿತ ಒಪ್ಪಂದಿಂದ ಬರುವ ಹಣದಿಂದ ಕಾನೂನು ಸಮರಕ್ಕೆ ನೆರವಾಗಲಿದೆ ಎಂದು ವಿವರಿಸಿದ್ದಾರೆ. ಏತನ್ಮಧ್ಯೆ, ತನ್ನ ಮೇಲೆ ಹೊರಿಸಿರುವ ಅತ್ಯಾಚಾರ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
'ನಾನು ಆತ್ಮಕಥೆ ಪುಸ್ತಕ ಬರೆಯುವ ಇಚ್ಛೆ ಹೊಂದಿಲ್ಲ. ಆದರೆ ನನ್ನ ಆತ್ಮಕಥೆ ಪುಸ್ತಕ ಪ್ರಕಟಿಸಲು ಪ್ರಕಾಶಕರು ಮುಂದೆ ಬಂದಿದ್ದಾರೆ' ಎಂದು ಅಸಾಂಜ್ ಸಂಡೆ ಟೈಮ್ಸ್ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕಾನೂನು ಸಮರಕ್ಕಾಗಿ ಈಗಾಗಲೇ 200,000 ಪೌಂಡ್ಸ್ ವ್ಯಯಿಸಿದ್ದೇನೆ.ಹಾಗಾಗಿ ನನಗೆ ಈಗ ಹಣದ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಅಮೆರಿಕದ ಪಬ್ಲಿಶರ್ ಅಲ್ಫ್ರೆಡ್ ನೂಫ್ ಅವರಿಂದ 800,000 ಡಾಲರ್ ಹಣವನ್ನು ಪಡೆದಿದ್ದೇನೆ. ಅದೇ ರೀತಿ ಬ್ರಿಟನ್ ಪಬ್ಲಿಶರ್ ಜತೆಗಿನ ಒಪ್ಪಂದಿಂದ 500,000 ಡಾಲರ್ ಸೇರಿದಂತೆ ಒಟ್ಟು 1.5 ಮಿಲಿಯನ್ ಹಣ ತನಗೆ ಸೇರಲಿದೆ. ನನ್ನ ಆತ್ಮಕಥೆಯನ್ನು ಪ್ರಕಾಶಕರೇ ಪ್ರಕಟಿಸಲಿದ್ದಾರೆ ಎಂದು ಅಸಾಂಜ್ ವಿವರಿಸಿದ್ದಾರೆ.