ಇಸ್ಲಾಮಾಬಾದ್, ಸೋಮವಾರ, 27 ಡಿಸೆಂಬರ್ 2010( 15:12 IST )
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಸಲು ಪಾಕಿಸ್ತಾನ ಆಯೋಗಕ್ಕೆ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಏಳು ಮಂದಿ ಶಂಕಿತ ಉಗ್ರರ ವಿಚಾರಣೆ ನಡೆಸಲು ವಿಳಂಬ ಆಗುತ್ತಿರುವುದಾಗಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಕಸಬ್‌ನ ಹೇಳಿಕೆ ಪಾಕಿಸ್ತಾನ ಆಯೋಗಕ್ಕೆ ತುಂಬಾ ಅಗತ್ಯವಾಗಿದೆ. ಆದರೆ ಭಾರತ ಆಯೋಗಕ್ಕೆ ಭೇಟಿ ನೀಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
ಆ ನಿಟ್ಟಿನಲ್ಲಿ ಪ್ರಕರಣದ ವಿಚಾರಣೆ ಪಾಕಿಸ್ತಾನದ ಕಡೆಯಿಂದ ವಿಳಂಬವಾಗುತ್ತಿಲ್ಲ. ಅಜ್ಮಲ್ ಕಸಬ್‌ನ ಹೇಳಿಕೆ ಆಯೋಗಕ್ಕೆ ತುಂಬಾ ಪ್ರಮುಖವಾಗಿದ್ದರಿಂದ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಪ್ರಸ್ತಾಪ ಕಳುಹಿಸಿದ್ದೇವು. ಆದರೆ ಭಾರತ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಮಲಿಕ್ ತಿಳಿಸಿದ್ದಾರೆ.
ಇದರಿಂದಾಗಿ ಭಾರತದ ಕಡೆಯಿಂದಲೇ ವಿಚಾರಣೆ ವಿಳಂಬವಾಗುತ್ತಿದೆ. ಹಾಗಾಗಿ ಪಾಕಿಸ್ತಾನ ಆಯೋಗ ಭಾರತಕ್ಕೆ ಭೇಟಿ ನೀಡುವ ಮನವಿ ಕುರಿತಂತೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವುದಾಗಿ ಮಲಿಕ್ ಹೇಳಿದ್ದಾರೆ.