ಇಸ್ಲಾಮಾಬಾದ್, ಮಂಗಳವಾರ, 28 ಡಿಸೆಂಬರ್ 2010( 13:02 IST )
ಆಡಳಿತಾರೂಢ ಮೈತ್ರಿಕೂಟ ಸರಕಾರದಿಂದ ಹೊರ ನಡೆಯುವುದಾಗಿ ಮುತ್ತಾಹಿದಾ ಖ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಾಕ್ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ನಾವು ನಮ್ಮದೇ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ಎಂಕ್ಯೂಎಂನ ಹೈದರ್ ಅಬ್ಬಾಸ್ ರಿಜ್ವಿ ಸಾಮಾ ಟಿವಿ ಚಾನೆಲ್ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ಪಕ್ಷದ ಇಬ್ಬರು ಫೆಡರಲ್ ಸಚಿವರಾದ ಫಾರೂಕ್ ಸತ್ತಾರ್ ಮತ್ತು ಬಾಬಾರ್ ಖಾನ್ ಘೋರಿ ಮಂಗಳವಾರ ರಾಜೀನಾಮೆ ನೀಡಲಿದ್ದು, ಅದನ್ನು ಪ್ರಧಾನಿ ಗಿಲಾನಿ ಅವರಿಗೆ ರವಾನಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿಂಧ್ ಪ್ರಾಂತ್ಯದ ಗೃಹ ಸಚಿವ ಜುಲ್ಫಿಕರ್ ಮಿರ್ಜಾ ಅವರು, ಎಂಕ್ಯೂಎಂ ಹಣ ಸುಲಿಗೆ ಮತ್ತು ಕರಾಚಿಯಲ್ಲಿ ಜನರನ್ನು ಕೊಲ್ಲುವ ಕೃತ್ಯದಲ್ಲಿ ತೊಡಗಿರುವುದಾಗಿ ಆರೋಪಿಸಿದ್ದರು. ಈ ಬಗ್ಗೆ ಪಾಕ್ ಸರಕಾರ ಸೂಕ್ತ ವಿವರಣೆ ನೀಡಬೇಕೆಂದು ಎಂಕ್ಯೂಎಂ ಹತ್ತು ದಿನಗಳ ಗಡುವು ವಿಧಿಸಿತ್ತು.
ಅಷ್ಟೇ ಅಲ್ಲ ಮಿರ್ಜಾ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರಿಗೂ ಎಂಕ್ಯೂಎಂ ನಿಯೋಗ ಕರೆ ನೀಡಿತ್ತು. ಆದರೆ ಬಗ್ಗೆ ಸರಕಾರ ಸಮರ್ಪಕ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಾವು ತಮ್ಮದೇ ದಾರಿ ನೋಡಿಕೊಳ್ಳುವುದಾಗಿ ಎಂಕ್ಯೂಎಂ ತಿಳಿಸಿದೆ.