ಇಸ್ರೇಲ್ ಇಂಟೆಲಿಜೆನ್ಸ್ ಸರ್ವಿಸ್ ಮೋಸ್ಸಾದ್ ಪರ ಗೂಢಚಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇರಾನ್ ಮಂಗಳವಾರ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಿರುವುದಾಗಿ ತೆಹ್ರಾನ್ ಪ್ರಾಸಿಕ್ಯೂಟರ್ಸ್ ಕಚೇರಿ ಮೂಲಗಳು ತಿಳಿಸಿರುವುದಾಗಿ ಐಆರ್ಎನ್ಎ ವರದಿ ಮಾಡಿದೆ.
ಮೋಸ್ಸಾದ್ ಪರ ಗೂಢಚಾರಿಕೆ ನಡೆಸಿ ದೋಷಿ ಎಂದು ಸಾಬೀತಾದ ನಿಟ್ಟಿನಲ್ಲಿ ಅಲಿ ಅಕ್ಬರ್ ಸಿಯಾದಾತ್ ಎಂಬಾತನನ್ನು ಮಂಗಳವಾರ ತೆಹ್ರಾನ್‌ನಲ್ಲಿ ಗಲ್ಲಿಗೇರಿಸಲಾಯಿತು ಎಂದು ವರದಿ ವಿವರಿಸಿದೆ. ಅಲಿ ಅಕ್ಬರ್ ಕಳೆದ ಆರು ವರ್ಷಗಳಿಂದ ಮೋಸ್ಸಾದ್ ಜತೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.
ಅಲಿ ಅಕ್ಬರ್ ಇಸ್ರೇಲ್‌ನ ರಾಯಭಾರಿ ಕಚೇರಿ ಜತೆ ಸಂಪರ್ಕ ಹೊಂದಿದ್ದ. ಅಷ್ಟೇ ಅಲ್ಲ ಆತ ಇರಾನ್ ಮಿಲಿಟರಿ ನೆಲೆಯ ಮಹತ್ವದ ಮಾಹಿತಿಗಳನ್ನು ರವಾನಿಸುತ್ತಿದ್ದ ಎಂದು ಇರಾನ್ ಆರೋಪಿಸಿರುವುದಾಗಿ ವರದಿ ಹೇಳಿದೆ. ಈತ ದೇಶದ ರೆವಲ್ಯೂಷನರಿ ಗಾರ್ಡ್ಸ್‌ನ ಮಿಸೈಲ್‌ಗಳ ಬಗ್ಗೆ ಮಾಹಿತಿಯನ್ನೂ ರವಾನಿಸಿದ್ದ. ಇದಕ್ಕಾಗಿ ಆತ ಸುಮಾರು 60,000 ಡಾಲರ್ ಹಣವನ್ನು ಪಡೆದಿದ್ದ. ಅದೇ ರೀತಿ ಅಲಿ ಟರ್ಕಿ, ಥಾಯ್‌ಲ್ಯಾಂಡ್ ಮತ್ತು ನೆದರ್ಲ್ಯಾಂಡ್‌ಗಳಲ್ಲಿರುವ ಇಸ್ರೇಲ್ ಇಂಟೆಲಿಜೆನ್ಸ್ ಜತೆಯೂ ಸಂಪರ್ಕ ಹೊಂದಿದ್ದ ಎಂದು ಇರಾನ್ ದೂರಿದೆ ಎಂದು ವರದಿ ವಿವರಿಸಿದೆ.