2010 ಪತ್ರಕರ್ತರ ಪಾಲಿಗೆ ಲ್ಯಾಟಿನ್ ಅಮೆರಿಕ ಅತ್ಯಂತ ಅಪಾಯಕಾರಿ ದೇಶವಾಗಿತ್ತು. ಜಗತ್ತಿನಾದ್ಯಂತ ಹತ್ಯೆಗೈಯಲ್ಪಟ್ಟ 105 ಪತ್ರಕರ್ತರಲ್ಲಿ 35 ಮಂದಿ ಲ್ಯಾಟಿನ್ ಅಮೆರಿಕದಲ್ಲೇ ಸಾವಿಗೀಡಾಗಿರುವುದಾಗಿ ಸ್ವಿಸ್ ಮೂಲದ ಪ್ರೆಸ್ ಎಂಬ್ಲೆಮ್ ಕ್ಯಾಂಪೇನ್ (ಪಿಇಸಿ) ಆರೋಪಿಸಿದೆ.
ಅದೇ ರೀತಿ ಮಕ್ಸಿಕೋ ಕೂಡ ಮೋಸ್ಟ್ ಡೇಂಜರಸ್ ದೇಶವಾಗಿದ್ದು, ಇಲ್ಲಿ 14 ಪತ್ರಕರ್ತರನ್ನು ಹತ್ಯೆಗೈಯಲಾಗಿತ್ತು. ಪಾಕಿಸ್ತಾನದಲ್ಲಿಯೂ ಕೂಡ 14 ಮಂದಿಯನ್ನು ಕೊಲೆ ಮಾಡಲಾಗಿದೆ ಎಂದು ಪಿಇಸಿ ತಿಳಿಸಿದೆ. ಹೋಂಡೂರಾಸ್‌ನಲ್ಲಿ 9, ಇರಾಕ್‌ನಲ್ಲಿಯೂ ಒಂಬತ್ತು ಮಂದಿ ಪತ್ರಕರ್ತರನ್ನು ಹತ್ಯೆಗೈಯಲಾಗಿದೆ.
ಕೊಲಂಬಿಯಾ ಕೂಡ ಮಾಧ್ಯಮಕ್ಕೆ ಅತೀ ಅಪಾಯಕಾರಿ ದೇಶವಾಗಿದ್ದು, ನಾಲ್ವರನ್ನು ಪತ್ರಕರ್ತರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಫಿಲಿಫೈನ್ಸ್ ನಲ್ಲಿ ಎರಡು, ರಷ್ಯಾದಲ್ಲಿ ಓರ್ವ ಪತ್ರಕರ್ತ ಹತ್ಯೆಗೀಡಾಗಿರುವುದಾಗಿ ಸ್ವಿಸ್ ಪಿಇಸಿ ವಿವರಿಸಿದೆ.
ಪತ್ರಕರ್ತರನ್ನು ಕೊಲ್ಲುವ ಈ ಅಂಟುರೋಗ ವಾಸಿಯಾಗದ ಕಾಯಿಲೆಯಾಗಿದೆ ಎಂದು ಪಿಇಸಿ ಪ್ರಧಾನ ಕಾರ್ಯದರ್ಶಿ ಬ್ಲೈಸೆ ಲೆಂಪೆನ್ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಕೂಡ ಪರಿಹಾರ ಹುಡುಕಲು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಪತ್ರಕರ್ತರನ್ನು ಕೊಲ್ಲುವ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.