ಪೋಲ್ಯಾಂಡ್‌ನ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಎರಡೂ ಶಿಶುಗಳ ತಂದೆ ಮಾತ್ರ ಬೇರೆ, ಬೇರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ಇದು ಜಗತ್ತಿನಲ್ಲಿನ ಏಳನೇ ಪ್ರಕರಣವಾಗಿದೆಯಂತೆ!
ಗಂಡ ಹಾಗೂ ಮತ್ತೊಬ್ಬ ಪುರುಷನ ಜತೆಗಿನ ಅನೈತಿಕ ಸಂಬಂಧದ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ಟಿವಿಎನ್ 24 ವರದಿ ಮಾಡಿದೆ. ಆದರೆ ಆಕೆಯ ಹೆಸರು, ವಯಸ್ಸು ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿಯೂ ವರದಿ ತಿಳಿಸಿದೆ. ಏತನ್ಮಧ್ಯೆ ಮಹಿಳೆ ಪರೀಕ್ಷೆಗೆ ಒಳಗಾದ ನಂತರ ತನ್ನ ಗಂಡನೇ ಅವಳಿ ಮಕ್ಕಳ ತಂದೆ ಅಲ್ಲ ಎಂಬುದು ಬಹಿರಂಗವಾಗಿತ್ತು.
ಪರೀಕ್ಷೆಯಲ್ಲಿ ಒಂದು ಗಂಡು ಮಗುವಿನ ತಂದೆ ಗಂಡನಾಗಿದ್ದು, ಮತ್ತೊಂದು ಹೆಣ್ಣು ಮಗುವಿನ ತಂದೆ ಮತ್ತೊಬ್ಬ ವ್ಯಕ್ತಿ ಎಂಬುದು ಸಾಬೀತಾಗಿತ್ತು. ಇಂತಹ ಪ್ರಕರಣಗಳು ಜಗತ್ತಿನಲ್ಲಿ ತುಂಬಾ ವಿರಳ ಎಂದು ವರದಿ ವಿವರಿಸಿದೆ.