ಸಾರ್ವಜನಿಕ ಹಣ ಮತ್ತು ಅಧಿಕಾರ ದುರ್ಬಳಕೆ ಆರೋಪದಡಿಯಲ್ಲಿ ಬಾಂಗ್ಲಾದೇಶದ ಮಾಜಿ ಸ್ಪೀಕರ್, ಉಪ ಸ್ಪೀಕರ್ ಹಾಗೂ ವಿರೋಧ ಪಕ್ಷದ ಹಿರಿಯ ಮುಖಂಡರೊಬ್ಬರ ವಿರುದ್ಧ ಬಾಂಗ್ಲಾದೇಶ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಮೊಕದ್ದಮೆಯನ್ನು ದಾಖಲಿಸಿದೆ.
ಬಾಂಗ್ಲಾ ಮಾಜಿ ಸ್ಪೀಕರ್ ಜಾಮಿರುದ್ದೀನ್ ಸಿರ್ಕಾರ್, ಉಪ ಸ್ಪೀಕರ್ ಅಖ್ತರ್ ಹಮಿದ್, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಮುಖಂಡ ಖಾಂಡೇಕರ್ ಡೆಲ್ವಾರ್ ಹೋಸೈನ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಸಿ ಮಂಗಳವಾರ ದೂರು ದಾಖಲಿಸಿದೆ.
ಸಿರ್ಕಾರ್ ಮತ್ತು ಉಪ ಸ್ಪೀಕರ್ 2001-2006ರವರೆಗೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರಕಾರಿ ಮನೆಯ ಪೀಠೋಪಕರಣಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಅಷ್ಟೇ ಅಲ್ಲ ಅಡುಗೆ ಅನಿಲ, ವಿದ್ಯುತ್ ಬಿಲ್ ಅನ್ನು ಕೂಡ ಸರಕಾರದ ಹಣದಿಂದಲೇ ಪಾವತಿ ಮಾಡಿದ್ದರು.
ಅಲ್ಲದೇ ಸಿರ್ಕಾರ್ ಮತ್ತು ಡೆಲ್ವಾರ್ ಅವರು ಸುಮಾರು 20 ಮಿಲಿಯನ್‌ನಷ್ಟು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಭ್ರಷ್ಟಾಚಾರ ನಿಗ್ರಹ ಆಯೋಗ ಪತ್ತೆ ಹಚ್ಚಿರುವುದಾಗಿ ಡೈಲಿ ಸ್ಟಾರ್ ವರದಿ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಬಗ್ಗೆ ತನಿಖೆ ನಡೆಸಿರುವ ಎಸಿಸಿ, ಅವರ ವಿರುದ್ಧ ಪ್ರಾಥಮಿಕ ಕ್ರಮ ಕೈಗೊಳ್ಳಬೇಕೆಂದು ಸಂಸದೀಯ ಸಮಿತಿಗೆ ಶಿಫಾರಸು ಮಾಡಿದೆ.