ಇಸ್ಲಾಮಾಬಾದ್, ಬುಧವಾರ, 29 ಡಿಸೆಂಬರ್ 2010( 17:27 IST )
ದೇಶಾದ್ಯಂತ ಹೆಚ್ಚು ಭಯೋತ್ಪಾದನಾ ದಾಳಿ ನಡೆಸುವ ನಿಟ್ಟಿನಲ್ಲಿ ಪಾಕಿಸ್ತಾನ ತಾಲಿಬಾನ್ ಸಂಘಟನೆ ಮಹಿಳಾ ಆತ್ಮಹತ್ಯಾ ಬಾಂಬರ್‌ಗಳಿಗೆ ಹೆಚ್ಚಿನ ತರಬೇತಿ ನೀಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ನಾಟಕೀಯ ಬೆಳವಣಿಗೆಯೊಂದರಲ್ಲಿ 12ರ ಹರೆಯದ ಬಾಲಕಿಯೊಬ್ಬಳು ಅಫ್ಘಾನಿಸ್ತಾನದ ಗಡಿಭಾಗದಲ್ಲಿನ ತಾಲಿಬಾನ್ ಬಂಡುಕೋರರ ಸೆರೆಯಿಂದ ತಪ್ಪಿಸಿಕೊಂಡು ಬಂದ ನಂತರ ಆಕೆ ಈ ಸ್ಫೋಟಕ ಮಾಹಿತಿ ನೀಡಿದ್ದಾಳೆ.
'ಯಾವುದೇ ಪರಿಸ್ಥಿತಿಯಲ್ಲಾಗಲಿ ನಿನ್ನನ್ನು ಸ್ಫೋಟಿಸಿಕೊಳ್ಳುವ ಮೂಲಕ ನೀನು ಸ್ವರ್ಗದ ಹಾದಿ ಹಿಡಿಯಬಹುದು' ಎಂದು ಉಗ್ರರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿರುವ ಮೀನಾ ಗುಲ್ ಸಹೋದರ, ತಾಲಿಬಾನ್ ಕಮಾಂಡರ್ ಆಕೆಗೆ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳಿಗೆ ವಿವರಿಸಿದ್ದಾಳೆ.
ತಾಲಿಬಾನ್ ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಮೀನಾ ಡಿರ್ ಜಿಲ್ಲೆಯ ಮುಂಡಾ ಎಂಬಲ್ಲಿ ಭದ್ರತಾ ಸಿಬ್ಬಂದಿಗಳು ಆಕೆಯನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ವಿಚಾರಣೆಗೊಳಪಡಿಸಿದಾಗ ಈ ವಿಷಯ ಬಹಿರಂಗಪಡಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ವರದಿ ಮಾಡಿದೆ.
ತಾಲಿಬಾನ್ ಗೆರಿಲ್ಲಾ ಪಡೆಯ ಅಡಗುತಾಣವನ್ನು ಕೊರೆದು ಮೀನಾ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಹಲವು ಮಹಿಳೆಯರನ್ನು ಆತ್ಮಹತ್ಯಾ ಬಾಂಬರ್ ತರಬೇತಿ ನೀಡಿದ್ದು, ದೇಶದ ವಿವಿಧೆಡೆ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಆಕೆ ತಿಳಿಸಿದ್ದಾಳೆ. ತನ್ನ ಸಹೋದರಿ ಜೈನಾಬ್ ಆತ್ಮಹತ್ಯಾ ಬಾಂಬರ್ ತರಬೇತಿ ನೀಡುವ ಹೊಣೆ ಹೊತ್ತುಕೊಂಡಿದ್ದು, ಅಫ್ಘಾನಿಸ್ತಾನದ ತಮ್ಮ ಗ್ರಾಮದಿಂದ ಎಂಟು ಮಂದಿ ಮಹಿಳೆಯರನ್ನು ಕರೆದುಕೊಂಡು ಹೋಗಿರುವುದಾಗಿ ಮೀನಾ ವಿವರಿಸಿದ್ದಾಳೆ.